ಬೆಂಗಳೂರು, ಏ.19-ಮೊದಲ ಹಂತದ ಮತದಾನದ ವೇಳೆ ವಿದ್ಯುತ್ ವ್ಯತ್ಯಯ, ಮತಯಂತ್ರಗಳ ತಾಂತ್ರಿಕ ಸಮಸ್ಯೆ ಹಾಗೂ ಮಳೆ ಕಾರಣದಿಂದ ನಿನ್ನೆ ತಡರಾತ್ರಿಯವರೆಗೂ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಸಿಬ್ಬಂದಿಗಳನ್ನು ಹೈರಾಣಾಗಿಸಿದೆ.
ಬೆಂಗಳೂರಿನ ವಿಜಯನಗರದ 116ನೇ ಮತಗಟ್ಟೆಯಲ್ಲಿ ವಿದ್ಯುತ್ ಕೈಕೊಟ್ಟಿದ್ದರಿಂದ ಸಮಸ್ಯೆ ಎದುರಾಯಿತು. ಬ್ಯಾಟರಿ ಬ್ಯಾಕ್ಅಪ್ ಇಟ್ಟುಕೊಂಡು ಮತಯಂತ್ರಗಳನ್ನು ಚಾಲನೆ ಮಾಡಲಾಯಿತಾದರೂ ಮತದಾರರಿಗೆ ಬೆಳಕಿನ ಕೊರತೆ ಎದುರಾಯಿತು. ಹಾಗಾಗಿ ಮೇಣದ ಬತ್ತಿ ಸಹಾಯದಿಂದ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೈಸೂರಿನ ಗೌಸಿಯಾನಗರದ ಗೌರಿಶಂಕರ ಸರ್ಕಾರಿ ಶಾಲೆಯ ಮತಗಟ್ಟೆಯಿಂದ ಮತಯಂತ್ರಗಳನ್ನು ಸಾಗಿಸುವಾಗ ಬಸ್ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡು ಅರ್ಧ ದಾರಿಯಲ್ಲೇ ಕೆಲ ಕಾಲ ಬಸ್ ನಿಂತು ಹೋಗಿದೆ. ಅದನ್ನು ಸರಿಪಡಿಸಿ ಮಧ್ಯರಾತ್ರಿ ವೇಳೆಗೆ ಚಾಲಕ ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗೆ ಸಾಗಿಸಿದ್ದಾರೆ.
ಹಲವಾರು ಮತ ಕೇಂದ್ರಗಳಲ್ಲಿ ಮತಯಂತ್ರಗಳು ಕೈಕೊಟ್ಟು ಗಂಟೆಗಟ್ಟಲೆ ಮತದಾನ ವಿಳಂಬವಾಯಿತು. ಮತಯಂತ್ರ ಕೈಕೊಟ್ಟ ವ್ಯರ್ಥವಾದ ಸಮಯದಷ್ಟೇ ಅವಧಿಯನ್ನು ವಿಸ್ತರಣೆ ಮಾಡಿದ್ದರಿಂದ ಕೆಲವೆಡೆ ಮತದಾನ ರಾತ್ರಿ 8 ಗಂಟೆಯವರೆಗೂ ನಡೆಸಬೇಕಾಯಿತು.
ಎಲ್ಲವೂ ಮುಗಿದು ಮತಯಂತ್ರಗಳನ್ನು ಸ್ಟ್ರಾಂಗ್ರೂಂಗೆ ಸಾಗಿಸಬೇಕೆನ್ನುವಾಗ ಜೋರು ಮಳೆ ಆರಂಭವಾಯಿತು. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಮಳೆಯಾದರೂ ಟ್ರಾಫಿಕ್ ಅಸ್ತವ್ಯಸ್ತವಾಗಲಿದ್ದು, ನಿನ್ನೆ ಸಂಜೆ ನಂತರ ಬೆಂಗಳೂರಿನಾದ್ಯಂತ ಸಂಚಾರ ಹದಗೆಟ್ಟು ಹೀಗಾಗಿ ಮತಯಂತ್ರಗಳನ್ನು ಸ್ಟ್ರಾಂಗ್ರೂಂಗೆ ಸಾಗಿಸಲು ಸಿಬ್ಬಂದಿ ಮತ್ತು ಬಸ್ ಚಾಲಕರು ಪರದಾಡಬೇಕಾಯಿತು.
14 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲೂ ಇದೇ ಅವ್ಯವಸ್ಥೆ ಆಗಿದ್ದು, ತಾಂತ್ರಿಕ ಸಮಸ್ಯೆ, ಮಳೆಯ ಕಾರಣದಿಂದಾಗಿ ನಿಗದಿತ ಸಮಯಕ್ಕೆ ಮತ ಯಂತ್ರಗಳನ್ನು ತಲುಪಿಸಲಾಗದೆ ಸಿಬ್ಬಂದಿ ಪರದಾಡಿದ್ದಾರೆ.
ಕೆಲವು ಕಡೆಯಂತೂ ತಡರಾತ್ರಿ 2 ಗಂಟೆಯವರೆಗೂ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಹಿಂದೆಂದೂ ಇಲ್ಲದಷ್ಟು ತೊಂದರೆಗಳು ನಿನ್ನೆ ನಡೆದ ಚುನಾವಣೆ ವೇಳೆ ಕಾಣಿಸಿಕೊಂಡಿತು.