ಚುನಾವಣಾ ಆಯೋಗ ವಿಧಿಸಿರುವ ಪ್ರಚಾರ ನಿಷೇಧ ಉಲ್ಲಂಘಿಸಿದ ಸಿಎಂ ಯೋಗಿ ಆದಿತ್ಯನಾಥ್: ಮಾಯಾವತಿ ಆರೋಪ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಆಯೋಗ ವಿಧಿಸಿರುವ ಪ್ರಚಾರ ನಿಷೇಧ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಯೋಗಿ ಆದಿತ್ಯನಾಥ್ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ದಲಿತರ ಮನೆಗಳಲ್ಲಿ ಆಹಾರವನ್ನು ಸೇವಿಸುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದ್ದಾರೆ. ಮತದಾರರನ್ನು ಸೆಳೆಯಲು ಮಾಧ್ಯಮವನ್ನೇ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಚುನಾವಣಾ ಆಯೋಗವು ಅವರ ಮೇಲೆ ಯಾಕೆ ಇಷ್ಟು ಅನುಕಂಪ ತೋರುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗದ ಈ ರೀತಿಯ ತಾರತಮ್ಯವು ಮುಂದುವರಿದರೆ ಮುಕ್ತ ಮತ್ತು ನ್ಯಾಯೋಚಿತವಾಗಲು ಅಸಾಧ್ಯ. ಈ ಸಂದರ್ಭಗಳಲ್ಲಿ ಸಾರ್ವಜನಿಕ ಪರಿಸ್ಥಿತಿ ಹೇಗೆ ಎಂದು ಮಾಯಾವತಿ ಕೇಳಿದ್ದಾರೆ.

ಮಾಯಾವತಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಮಾಧ್ಯಮ ಸಲಹೆಗಾರ ಮೃತ್ಯಂಜಯ್ ಕುಮಾರ್ ಅವರು, ಆಮಂತ್ರಣ ಬಂದಿದ್ದರಿಂದ ಯೋಗಿ ಆದಿತ್ಯನಾಥ್ ಹಾಜರಿದ್ದರು ಎಂದು ತಿಳಿಸಿದ್ದಾರೆ. ಆಮಂತ್ರಣ ನೀಡಿದವರ ಮನೆಯಲ್ಲಿ ಊಟ ಮಾಡುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ವೈಯಕ್ತಿಕ ವಿಚಾರ. ಅಷ್ಟೇ ಅಲ್ಲದೆ ದೇವಾಲಯಗಳಿಗೆ ಭೇಟಿ ನೀಡುವುದು ಹೇಗೆ ಚುನಾವಣಾ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಮೃತ್ಯಂಜಯ್ ಕುಮಾರ್ ಪ್ರಶ್ನಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‍ಪಿ ನಾಯಕಿ ಮಯಾವತಿ ಅವರಿಗೆ ಚುನಾವಣಾ ಆಯೋಗವು ಇಬ್ಬರಿಗೂ ಏಪ್ರಿಲ್ 15ರಂದು ನೋಟಿಸ್ ಜಾರಿ ಮಾಡಿತ್ತು. ಈ ಮೂಲಕ ಏಪ್ರಿಲ್ 16ರಿಂದ ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆ ಮತ್ತು ಮಯಾವತಿ ಅವರಿಗೆ 48 ಗಂಟೆಗಳ ಕಾಲ ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ