ಭಾಲ್ಕಿಯಲ್ಲಿ ಈಶ್ವರ ಖಂಡ್ರೆ ಶಕ್ತಿ ಪ್ರದರ್ಶನ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಸ್ವಕ್ಷೇತ್ರವಾದ ಭಾಲ್ಕಿಯಲ್ಲಿ ಗುರುವಾರ ಬಿರುಸಿನ ಪ್ರಚಾರ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಖಟಕ ಚಿಂಚೋಳಿ, ಹಲಬರ್ಗಾ, ನಿಟ್ಟೂರ (ಬಿ) ಸೇರಿದಂತೆ ವಿವಿಧ ಕಡೆಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇವಲ ಸುಳ್ಳು ಭಾಷಣ ಮಾಡುವುದು ಬಿಜೆಪಿಯವರ ಕೆಲಸವಾಗಿದೆ. ಸಂಸದ ಭಗವಂತ ಖೂಬಾ ಐದು ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ. ಖೂಬಾ ಸಾಧನೆ ಶೂನ್ಯವಾಗಿದೆ. ಈ ಬಾರಿ ಕಾಂಗ್ರೆಸ್ ಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಭಾಲ್ಕಿ ಕ್ಷೇತ್ರದ ಮತದಾರರು ಶೇ.90ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ದೇಶಕ್ಕೆ ಹೊಸ ಸಂದೇಶ ನೀಡಬೇಕು. ಭಾಲ್ಕಿಯಲ್ಲಿ ವಿರೋಧ ಪಕ್ಷವೇ ಇಲ್ಲ. ಇಲ್ಲಿ ಸಂಪೂರ್ಣ ಕಾಂಗ್ರೆಸ್ ಮಯವಾಗಿದೆ. 23ರಂದು ಪ್ರತಿಯೊಬ್ಬರು ಮತದಾನದ ಹಕ್ಕು ಚಲಾಯಿಸುವ ಮೂಲಕ ಕಾಂಗ್ರೆಸ್ ಗೆ ಬೆಂಬಲಿಸಿ, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಸುಳ್ಳು ಹೇಳುವುದು, ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವುದೇ ಬಿಜೆಪಿಯರವ ಕೆಲಸವಾಗಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಳೆದ ಐದು ವರ್ಷಗಳಲ್ಲಿ ಏನೇನು ಕೆಲಸ ಮಾಡಿಲ್ಲ. ಅವಕಾಶ ಕೊಟ್ಟರು ಕೆಲಸ ಮಾಡದ ಖೂಬಾಗೆ ಮತ ಕೊಡುವುದರಲ್ಲಿ ಅರ್ಥವಿಲ್ಲ.

ಈ ಬಾರಿಗೆ ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕು ಎಂದರು.

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1000 ಗ್ರಾಮಗಳಿವೆ. ಈ ಪೈಕಿ ಆದರ್ಶ ಯೋಜನೆಯಡಿ ತೆಗೆದುಕೊಂಡು ಗೋರ್ಟಾ ಗ್ರಾಮವನ್ನು ಸಹ ಅವರಿಗೆ ಅಭಿವೃದ್ಧಿಪಡಿಸಲು ಭಗವಂತ ಖೂಬಾ ಅವರಿಗೆ ಸಾಧ್ಯವಾಗಿಲ್ಲ. ಇಂಥ ನಿಷ್ಕ್ರೀಯ ವ್ಯಕ್ತಿಗೆ ಮತ್ತೊಂದು ಬಾರಿ ಯಾಕೆ ಆಯ್ಕೆ ಮಾಡಬೇಕೆ ಎಂದು ಖಂಡ್ರೆ ಪ್ರಶ್ನಿಸಿದರು.

ಬೀದರ್ ಜಿಲ್ಲೆಯಲ್ಲಿ ಬಹುತೇಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಖಂಡ್ರೆ ಪರಿವಾರ ಶ್ರಮಿಸಿದೆ. ನೀರಾವರಿ ಯೋಜನೆ, ಸಕ್ಕರೆ ಕಾರಖಾನೆ, ಶಾಲಾ ಕಾಲೇಜು ಮುಂತಾದವುಗಳನ್ನು ಸ್ಥಾಪಿಸಿದೆ. ಮಾದರಿ ಕ್ಷೇತ್ರಕ್ಕಾಗಿ, ಸರ್ವಾಂಗೀಣ ವಿಕಾಸಕ್ಕೆ ಕಾಂಗ್ರೆಸ್ ಗೆ ಮತ ನೀಡಿಬೇಕು ಎಂದು ಅವರು ಮನವಿ ಮಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನರೇಂದ್ರ ಮೋದಿ 2014 ರ ಚುನಾವಣೆ ವೇಳೆ ಭರವಸೆ ನೀಡಿದ್ದರು. ವಾಸ್ತವಿಕವಾಗಿ ಉದ್ಯೋಗ ಸೃಷ್ಟಿಯಾಗಿವೆಯೇ, ಯುವಕರಿಗೆ ನೌಕರಿ ಸಿಕ್ಕಿದೆಯೇ ಎಂದು ಖಂಡ್ರೆ ಪ್ರಶ್ನಿಸಿದರು. ಮೋದಿ ಯುವಕರ ವಿರೋಧಿ ಆಗಿದ್ದರಿಂದ ಅವರ ಪಕ್ಷದ ಅಭ್ಯರ್ಥಿಗೆ ಯುವಕರ ಮತ ಕೇಳುವ ನೈತಿಕತೆ ಇಲ್ಲ ಎಂದು ಹೇಳಿದರು.
————

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ