ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಿಂದ ಗದ್ವಾರಕ್ಕೆ ತೆರಳುತ್ತಿದ್ದ 14 ಯಾತ್ರಿಗಳನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಮಾಡಿದ್ದಾರೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 14 ಯಾತ್ರಿಕರನ್ನು ತಡೆದ 15ರಿಂದ 20 ಜನರಿದ್ದ ಬಂದೂಕುದಾರಿಗಳು ಯಾತ್ರಿಕರನ್ನು ಬಸ್ ನಿಂದ ಕೆಳಗಿಳಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಬದುಕುಳಿದಿದ್ದು, ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ನಿರ್ಲಕ್ಷ್ಯವೇ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಅರೆಸೇನಾ ಪಡೆಯ ಸಮವಸ್ತ್ರದಲ್ಲಿದ್ದ ದುಷ್ಕರ್ಮಿಗಳು 5 ರಿಂದ 6 ಬಸ್ ಗಳನ್ನು ನಿಲ್ಲಿಸಿ 14 ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ್ದು ಯಾರು ಎನ್ನುವುದು ತಿಳಿದು ಬಂದಿಲ್ಲ.
2015ರಲ್ಲಿಯೂ ಬಲೂಚಿಸ್ತಾನ ಮಸ್ತುಂಗ ಪ್ರದೇಶದಲ್ಲಿ ಇದೇ ರೀತಿಯಲ್ಲಿ ದಾಳಿ ನಡೆದಿತ್ತು. ಅಂದು ಕರಾಚಿಯತ್ತ ಪ್ರಯಾಣಿಸುತ್ತಿದ್ದ 24 ಯಾತ್ರಿಗಳನ್ನು ಪರಿಶೀಲನೆ ಹೆಸರಿನಲ್ಲಿ ಕೆಳಗಿಳಿಸಿ ವಶಕ್ಕೆ ಪಡೆದುಕೊಂಡಿದ್ದರು. 24 ಪ್ರಯಾಣಿಕರ ಪೈಕಿ 19 ಪ್ರಯಾಣಿಕರನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಕಳೆದ ವಾರ ಕ್ವೆಟ್ಟಾದಲ್ಲಿ ಹಜಾರಾ ಸಮುದಾಯವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 20 ಜನರು ಸಾವನ್ನಪ್ಪಿದ್ದರು.
14 passengers shot dead after being offloaded from buses in Pakistan