ಲಂಡನ್, ಏ.17- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ತೀವ್ರ ಅಸಮಾಧಾನ ಹೊರಹಾಕಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಜೆಟ್ ಏರ್‍ವೇಸ್ ವಿಮಾನಯಾನ ಸಂಸ್ಥೆಗೆ ಬಂದೊದಗಿರುವ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಲದ ಸುಳಿ ಮತ್ತು ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‍ವೇಸ್ ಸಂಸ್ಥೆ ಮತ್ತು ಅದರ ಮಾಲೀಕ ನರೇಶ್ ಗೋಯಲ್ ಅವರಿಗೆ ನೈತಿಕ ಬೆಂಬಲ ಸೂಚಿಸಿರುವ 63 ವರ್ಷದ ಮಲ್ಯ ಈ ಕುರಿತು ಟ್ವಿಟ್ ಮಾಡಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸಂಕಷ್ಟದಿಂದ ಏರ್ ಇಂಡಿಯಾ ಸಂಸ್ಥೆಯನ್ನು ರಕ್ಷಿಸಿರುವ ಕೇಂದ್ರ ಸರ್ಕಾರ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚುತ್ತಿಲ್ಲ. ಈ ತಾರತಮ್ಯ ನೀತಿಯಿಂದಾಗಿ ಈ ಹಿಂದೆ ತಮ್ಮ ಒಡೆತನದ ಕಿಂಗ್ ಫಿಷರ್ ಏರ್‍ಲೈನ್ಸ್ ದುಸ್ಥಿತಿ ತಲುಪಿತ್ತು. ಈಗ ಜೆಟ್ ಏರ್‍ವೇಸ್ ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ವಿಷಾದಿಸಿದರು.
ಎಲ್ಲ ಬ್ಯಾಂಕ್‍ಗಳಿಗೆ ಪಾವತಿಸಬೇಕಿರುವ ಸಾಲದ ಬಾಕಿ ಮೊತ್ತವನ್ನು ಹಿಂದಿರುಗಿಸುತ್ತೇನೆ ಎಂದು ಮತ್ತೊಮ್ಮೆ ಹೇಳಿರುವ ಮಲ್ಯ ಕೇಂದ್ರ ಸರ್ಕಾರದ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ.
ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ 9 ಸಾವಿರ ಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ತೀರಿಸಲಾಗದೆ ಲಂಡನ್‍ಗೆ ಪರಾರಿಯಾಗಿರುವ ಮಲ್ಯ ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.