ಐಟಿ ಇಲಾಖೆಯಿಂದ 1.48 ಕೋಟಿ ರೂ. ಜಪ್ತಿ

ಚೆನ್ನೈ, ಏ.17-ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ನಾಳೆ ನಡೆಯಲಿರುವ ವಿಧಾನಸಭೆ ಉಪ ಚುನಾವಣೆಗಾಗಿ ಮತದಾರರಿಗೆ ವಿತರಿಸಲು ಮೀಸಲಾಗಿದ್ದ 1.48 ಕೋಟಿ ರೂ. ನಗದನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದು ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಪಕ್ಷದ ನಾಯಕರಿಗೆ ಸೇರಿದ್ದು ಎಂಬುದು ವಿಚಾರಣೆಯಿಂದ ಬಹಿರಂಗಗೊಂಡಿದೆ.

ಐಟಿ ದಾಳಿಗೆ ಪ್ರತಿಭಟನೆ ವ್ಯಕ್ತಪಡಿಸಿದ ಉದ್ರಿಕ್ತ ಕಾರ್ಯಕರ್ತರ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಅಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಖಚಿತ ಸುಳಿವಿನ ಮೇರೆಗೆ ಅಂಡಿಪೆಟ್ಟಿ ವಿಧಾನಸಭಾ ಕ್ಷೇತ್ರದ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿದ ಐಟಿ ಇಲಾಖೆ ಅಧಿಕಾರಿಗಳು ಲೆಕ್ಕಕ್ಕೆ ಲಭ್ಯವಾಗದ 1.48 ಕೋಟಿ ರೂ.ಗಳ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ(ತನಿಖೆಗಳು) ಬಿ. ಮುರಳಿ ಕುಮಾರ್ ತಿಳಿಸಿದ್ದಾರೆ.

ನಿನ್ನೆ ರಾತ್ರಿಯಿಂದ ನಡೆದ ಆರಂಭವಾದ ದಾಳಿ ಇಂದು ಬೆಳಗ್ಗೆ 5.30ಕ್ಕೆ ಪೂರ್ಣಗೊಂಡಿತು. ದಾಳಿ ನಡೆದ ಸ್ಥಳಗಳು ಶಾಸಕ ಟಿಟಿ ದಿನಕರನ್ ನೇತೃತ್ವದ ಎಎಂಎಂಕೆ ಪಕ್ಷದ ಮುಖಂಡರೊಬ್ಬರಿಗೆ ಸೇರಿವೆ. ದಾಳಿ ನಡೆದ ಸ್ಥಳದಲ್ಲಿ ಪಕ್ಷದ ಕಚೇರಿಯೂ ಇದೆ ಎಂದು ಕುಮಾರ್ ಹೇಳಿದ್ದಾರೆ.

1.48 ಕೋಟಿ ರೂ. ಹಣವನ್ನು 94 ಪ್ಯಾಕೆಟ್‍ಗಳು ಮತ್ತು ಲಕೋಟೆಗಳಲ್ಲಿ ಇರಿಸಲಾಗಿತ್ತು. ಪ್ರತಿ ಮತದಾರರಿಗೆ 300 ರೂ.ಗಳಂತೆ ವಿಧಾನಸಭಾ ಕ್ಷೇತ್ರದ ವಾರ್ಡ್‍ಗಳ ಸಂಖ್ಯೆ, ಅಲ್ಲಿರುವ ಮತದಾರರ ಸಂಖ್ಯೆ ಮತ್ತು ಮೊತ್ತವನ್ನು ಆಯಾ ಕವರ್‍ಗಳ ಮೇಲೆ ಬರೆಯಲಾಗಿತ್ತು.

ಗಾಳಿಯಲ್ಲಿ ಗುಂಡು :
ಪೊಲೀಸರ ನೆರನೊಂದಿಗೆ ಐಟಿ ಅಧಿಕಾರಿಗಳು ಈ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಎಎಂಎಂಕೆ ಕಾರ್ಯಕರ್ತರು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ.

ಈ ಸ್ಥಳದಲ್ಲಿದ್ದ ಸ್ಥಳೀಯ ಮುಖಂಡರೊಬ್ಬರನ್ನು ವಶಕ್ಕೆ ತೆಗೆದುಕೊಂಡು ಚಾರಣೆಗೆ ಒಳಪಡಿಸಿದಾಗ ಏಪ್ರಿಲ್ 16ರಂದು ಅಂಡಿಪೆಟ್ಟಿ ಪಂಚಾುತಿ ಪ್ರದೇಶದಿಂದ ಮತದಾರರಿಗೆ ಹಣ ನೀಡಲು ಒಟ್ಟು 2 ಕೋಟಿ ರೂ.ಗಳನ್ನು ತರಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಥೇನಿ ಜಿಲ್ಲೆಯ ಅಂಡಿಪೆಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ನಡೆಯಲಿರುವ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ