ಬೆಂಗಳೂರು, ಏ.17-ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ದೋಸ್ತಿ ಸರ್ಕಾರ ಒಂದಂಕಿಗೆ ಇಳಿದರೆ ಆಪರೇಷನ್ ಕಮಲ ನಡೆಸಲು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಹಸಿರು ನಿಶಾನೆ ತೋರಿದ್ದಾರೆ.
ಆದರೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವವರೆಗೂ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಕಟ್ಟಪ್ಪಣೆ ವಿಧಿಸಲಾಗಿದೆ.
ಆಪರೇಷನ್ ಕಮಲ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದ ಮೇಲೆ ಅವಲಂಭಿತವಾಗಿದೆ.ಪುನಃ ಬಿಜೆಪಿ ಜನಾದೇಶವನ್ನು ಪಡೆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಕಾಡಕ್ಕಿಳಿದಿದ್ದಾರೆ.
ಪ್ರತಿಷ್ಠಿತ ಕ್ಷೇತ್ರಗಳಾಗಿರುವ ಮಂಡ್ಯ , ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪರಾಭವಗೊಂಡರೆ ಸಹಜವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೈತಿಕ ಹೊಣೆ ಹೊರಬೇಕಾಗುತ್ತದೆ.
ತಂದೆ, ಮಗ ಹಾಗೂ ಸಹೋದರನ ಪುತ್ರನನ್ನು ಗೆಲ್ಲಿಸಲಾಗದೆ ಒಂದಂಕಿಗೆ ಇಳಿದರೆ ನೈತಿಕತೆ ಮೇಲೆ ರಾಜೀನಾಮೆ ನೀಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಫಲಿತಾಂಶ ಏನೇ ಆದರೂ ಕುಮಾರಸ್ವಾಮಿ ಅದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಸಬೂಬು ಹೇಳಬಹುದು.
ಈ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ ದೋಸ್ತಿ ಸರ್ಕಾರವನ್ನು ಭದ್ರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ.
ಬಿಜೆಪಿ ನಾಯಕರು ಊಹಿಸಿರುವಂತೆ ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಜೆಡಿಎಸ್ ಪರಾಭವಗೊಂಡರೆ ಇದಕ್ಕೆ ನೇರವಾಗಿ ಕಾಂಗ್ರೆಸ್ ನಾಯಕರೇ ಕಾರಣ ಎಂದು ದಳಪತಿಗಳು ಗೂಬೆ ಕೂರಿಸುತ್ತಾರೆ.
ಮಂಡ್ಯದಲ್ಲಿ ಕಾಂಗ್ರೆಸ್ನ ಯಾವುದೇ ನಾಯಕರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ಕುಮಾರಸ್ವಾಮಿಗೆ ಬೆಂಬಲ ನೀಡಲಿಲ್ಲ. ಇತ್ತ ತುಮಕೂರಿನಲ್ಲೂ ಕೂಡ ಟಿಕೆಟ್ ಕೈ ತಪ್ಪಿದ್ದರಿಂದ ಸಂಸದ ಮುದ್ದಹನುಮೇಗೌಡ ನಾಮಕಾವಸ್ಥೆಗೆ ಒಂದೆರೆಡು ಬಾರಿ ಪ್ರಚಾರಕ್ಕೆ ಬಂದರೆ ಬಹುತೇಕ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಜೆಡಿಎಸ್ಗೆ ಬೆಂಬಲ ನೀಡುವ ಬಗ್ಗೆ ತಗಾದೆ ತೆಗೆದಿದ್ದರು.
ಅತ್ತ ಹಾಸನದಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಹೀಗೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ದೋಸ್ತಿ ಪಕ್ಷಗಳಿಗೆ ಮುಖಭಂಗವಾದರೆ ಹಾದಿಬೀದಿಯಲ್ಲಿ ರಂಪಾಟ, ಕಿತ್ತಾಟ ಶುರುವಾಗುತ್ತದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ.
ಅಖಾಡಕ್ಕಿಳಿದ ಅಮಿತ್ ಶಾ:
ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸಲು ಹವಣಿಸುತ್ತಿರುವ ಅಮಿತ್ ಶಾ ಲೋಕಸಭೆ ಚುನಾವಣೆ ನಂತರ ಖುದ್ದು ಅಖಾಡಕ್ಕಿಳಿಯಲು ಮುಂದಾಗಿದ್ದಾರೆ.
ಈ ಬಾರಿ ಕಾಂಗ್ರೆಸ್-ಜೆಡಿಎಸ್ನಲ್ಲಿರುವ ಅತೃಪ್ತ ಶಾಸಕರನ್ನು ಹೇಗೆ ಮನವೊಲಿಸಬೇಕೆಂಬುದು ನನಗೆ ಗೊತ್ತು.ಕೇಂದ್ರದಲ್ಲಿ ನಮ್ಮ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ಈ ಸರ್ಕಾರ ಇರಬಾರದು. ಯಾವ ಯಾವ ಶಾಸಕರು ಅಸಮಾಧಾನಗೊಂಡಿದ್ದಾರೋ ಅಂತಹವರನ್ನು ರಹಸ್ಯವಾಗಿ ಸಂಪರ್ಕದಲ್ಲಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಆಪರೇಷನ್ ಕಮಲಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬದಲು ಬೇರೊಬ್ಬರಿಗೆ ವಹಿಸಲಾಗಿದೆ.ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಅತೃಪ್ತರಿಗೆ ಗಾಳ ಹಾಕಲು ಕಮಲ ನಾಯಕರು ಸಜ್ಜಾಗಿದ್ದಾರೆ.