ಪ್ಯಾರಿಸ್: ಪ್ಯಾರಿಸ್ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು ಕುಸಿದು ಬಿದ್ದಿವೆ.
ಘಟನೆ ವೇಳೆ ಐತಿಹಾಸಿಕ ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಕಟ್ಟಡಕ್ಕೆ ಹಬ್ಬಿದೆ. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಬೆಂಕಿಯನ್ನು ನಿಯಂತ್ರಣ ಮಾಡುವುದು ಕಷ್ಟದ ಕೆಲಸ. ಆದರೂ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು ತಿಳಿಸಿರುವಂತೆ ಈ ಐತಿಹಾಸಿಕ ಕಟ್ಟಡದ ಪ್ರಮುಖ ಭಾಗವನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಲಾಗಿದ್ದು, ಉಳಿದ ಭಾಗಗಳಿಗೆ ಬೆಂಕಿ ಹರಡದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
850 ವರ್ಷಗಳ ಹಿಂದೆ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡ ನಿರ್ಮಾಣಗೊಂಡಿತ್ತು. ಈ ಐತಿಹಾಸಿಕ ಕಟ್ಟಡ ನಿರ್ಮಾಣಕ್ಕೆ ಮರವನ್ನು ಹೆಚ್ಚು ಬಳಕೆ ಮಾಡಲಾಗಿತ್ತು. ಹಾಗಾಗಿ ಬೆಂಕಿ ಬಹುಬೇಗನೆ ಆವರಿಸಿಕೊಳ್ಳುತ್ತಿದೆ. ಈ ದುರಂತಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ನಾವು ಈ ಕಟ್ಟಡವನ್ನು ಮತ್ತೆ ಮರು ನಿರ್ಮಾಣ ಮಾಡುತ್ತೇವೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಹೇಳಿದ್ದಾರೆ.
ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಗೆ ಫ್ರಾನ್ಸ್ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ. “ನೊಟ್ರೆ ಡೇಮ್ ಕ್ಯಾಥೆಡ್ರಲ್ ಅಗ್ನಿ ದುರಂತ ನೋಡಿ ಬೇಸರಗೊಂಡೆ. ಬೆಂಕಿ ಆರಿಸಲು ಮೇಲಿನಿಂದ ನೀರನ್ನು ಸುರಿಯಬೇಕು,” ಎಂದು ಟ್ರಂಪ್ ಸಲಹೆ ನೀಡಿದ್ದರು. ಈ ಬಗ್ಗೆ ಫ್ರಾನ್ಸ್ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ‘ಡೊನಾಲ್ಡ್ ಟ್ರಂಪ್ ಹೇಳಿದಂತೆ ಮಾಡಿದರೆ ಕಟ್ಟಡಕ್ಕೆ ಹೆಚ್ಚು ಹಾನಿ ಉಂಟಾಗಲಿದೆ. ಹಾಗಾಗಿ ಇದು ಸಾಧ್ಯವಿಲ್ಲ,’ ಎಂದು ಪ್ರತಿಕ್ರಿಯಿಸಿದ್ದಾರೆ.