ದೇವೇಗೌಡರ ಪ್ಯಾಮಿಲಿ ಕಣ್ಣೀರಿಗೆ ಎಸ್ ಎಂ ಕೃಷ್ಣ ವ್ಯಂಗ್ಯ

ಬೆಂಗಳೂರು: ನಾನು ಕೂಡ ಕಣ್ಣೀರು ಹಾಕಬೇಕು ಎಂದು ಪ್ರಯತ್ನಿಸುತ್ತೇನೆ. ಆದರೆ ಕಣ್ಣೀರು ಬರುವುದೇ ಇಲ್ಲ ಎಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಸಿಎಂ ಕುಆರಸ್ವಾಮಿ ಅವರ ಕಣ್ಣೀರ ಕುರಿತು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ.ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ. ಬಹುಶಃ ಅವರ ಹೃದಯ ಮಿಡಿಯುತ್ತದೆ. ಒಬ್ಬ ತಂದೆಯ ಹೃದಯ ಮಕ್ಕಳಿಗಾಗಿ ಅಷ್ಟೂ ಮಿಡಿಯದೇ ಇದ್ದರೆ ಹೇಗೆ? ಹಾಗಾಗಿ ಅವರಿಗೆ ಕಣ್ಣೀರು ಬರುತ್ತದೆ ಎಂದರು.

ಕಾನೂನು ರಕ್ಷಣೆ ವಿಷಯ ಬಂದಾಗ ಸಿಎಂ ಕುಮಾರಸ್ವಾಮಿ ಪ್ರತಿಯೊಬ್ಬರಿಗೂ ರಕ್ಷಣೆ ಕೊಡಬೇಕಾಗಿರುವುದು ಅವರ ಮೂಲಭೂತ ಕರ್ತವ್ಯ. ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಮಂಜು ಸೇರಿದಂತೆ ಎಲ್ಲ ಅಭ್ಯರ್ಥಿಗಳಿಗೂ ಅವರು ರಕ್ಷಣೆ ಕೊಡಬೇಕು. ಇಲ್ಲವಾದರೆ ರಾಜ್ಯಾಂಗದಲ್ಲಿ ಅವರು ಸ್ವೀಕರಿಸುವ ಪ್ರಮಾಣ ವಚನಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಐ.ಟಿ., ಇ.ಡಿ. ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ. ಅವರೂ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸುತ್ತಿದ್ದಾರೆ. ಇ.ಡಿ., ಐ.ಟಿ.ಗೆ ಅವರ ಕೆಲಸ ಮಾಡಲು ಬಿಡಿ ಎಂದರು.

ಕಾಂಗ್ರೆಸ್‌ನಲ್ಲಿ ಸಾಕಷ್ಟು ಪ್ರಬುದ್ಧ ಅನುಭವಿ ನಾಯಕರಿದ್ದಾರೆ. ಆದರೆ, ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಸರಿಯಾದ ಸಲಹೆ ಕೊಡುತ್ತಿಲ್ಲ ಎನಿಸುತ್ತದೆ. ನಾನಂತೂ ಕಾಂಗ್ರೆಸ್ ಬಿಟ್ಟ ಕ್ಷಣದಿಂದಲೇ ಆ ಪಕ್ಷದ ಬಗ್ಗೆ ಚಿಂತೆ ನಡೆಸುವುದನ್ನು ಬಿಟ್ಟಿದ್ದೇನೆ. ಹವ್ಯಾಸಿ ಪ್ರಿಯ ಪ್ರಧಾನಿಗಳು ಇರುತ್ತಾರೆ. ನರೇಂದ್ರ ಮೋದಿಗೆ ಯಾವ ಹವ್ಯಾಸಗಳೂ ಇಲ್ಲ. ಹೋಗಲಿ ಮಕ್ಕಳು, ಮೊಮ್ಮಕ್ಕಳು ಎನ್ನುವ ಚಿಂತೆಯೂ ಇಲ್ಲ. ಒಬ್ಬ ಸೋದರ ಇದ್ದಾರೆ. ಆದರೆ, ನಗಣ್ಯ. ಹಾಗಾಗಿ ನರೇಂದ್ರ ಮೋದಿ ನಿರಾಳವಾಗಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ