ಬೆಂಗಳೂರು, ಏ.16- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಒಬ್ಬ ಅಪ್ರಬುದ್ಧ ನಾಯಕ.ಇಂತಹವರು ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ ನ್ಯಾಯಾಲಯದ ಮುಂದೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದವರು ದೇಶವನ್ನು ಮುನ್ನಡೆಸಲು ಅರ್ಹರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ವಾಗ್ದಾಳಿ ನಡೆಸಿದರು.
ಪ್ರಬುದ್ಧ ನಾಯಕತ್ವ ಇದ್ದವರು ಯೋಚಿಸಿ, ಆಲೋಚಿಸಿ ಪ್ರತಿಕ್ರಿಯಿಸುತ್ತಾರೆ.ಆದರೆ, ರಾಹುಲ್‍ಗಾಂಧಿ ಅಪ್ರಬುದ್ಧ ನಾಗಿದ್ದರಿಂದಲೇ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ. ಇಂತಹ ಹೇಳಿಕೆ ಕೊಡುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‍ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಆನೇಕ ಹಿರಿಯ ನಾಯಕರು ಇದ್ದರೂ ಇವರಿಗೆ ಯಾವ ಕಾರಣಕ್ಕಾಗಿ ಆ ಹುದ್ದೆಯನ್ನು ನೀಡಿದರು ಎಂಬುದು ಗೊತ್ತಿಲ್ಲ. ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್‍ಗೆ ರಾಹುಲ್‍ಗಾಂಧಿ ಅಂತಹ ನಾಯಕತ್ವ ಸಿಕ್ಕಿರುವುದು ಅತ್ಯಂತ ದುರ್ದೈವ ಎಂದು ವ್ಯಂಗ್ಯವಾಡಿದರು.
ನಮ್ಮ ದೇಶ ವೈವಿಧ್ಯಮಯವಾದದ್ದು.ಇದನ್ನು ಮುನ್ನಡೆಸಬೇಕಾದರೆ ಅಪಾರವಾದ ರಾಜಕೀಯ ಅನುಭವ ಇರಬೇಕಾಗುತ್ತದೆ. ರಾಹುಲ್‍ಗಾಂಧಿ ಅವರಲ್ಲಿ ಅದು ಯಾವುದೇ ಕಾರಣಕ್ಕೂ ಇಲ್ಲ. ಆತುರಾತುರವಾಗಿ ಎಲ್ಲದಕ್ಕೂ ಪ್ರತಿಕ್ರಿಯಿಸಿ ಗೊಂದಲಕ್ಕೆ ಸಿಲುಕಿಕೊಳ್ಳುವುದು ಅಭ್ಯಾಸವಾಗಿದೆ ಎಂದು ಕುಹುಕವಾಡಿದರು.
ದೇಶದಲ್ಲಿ ಈ ಬಾರಿ ಜನತೆ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶಕ್ಕೆ ಪ್ರಬುದ್ಧ ನಾಯಕತ್ವ ಅಗತ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರು ಏನೇ ಆರೋಪ ಮಾಡಿದರೂ ಮೋದಿ ಮತ್ತೆ ಪ್ರಧಾನಿಯಾಗುವುದು ನೂರಕ್ಕೆ ನೂರು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಯನ್ನು ಮತ್ತೆ ನಾನು ಪ್ರಧಾನಿಯಾಗಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ, ಅವರು ಅಡ್ಡಿಪಡಿಸುತ್ತಾರೆ ಎಂಬುದು ನನಗೆ ಗೊತ್ತು. ತಮ್ಮ ಭುಜಬಲದ ಪರಾಕ್ರಮದಿಂದಲೇ ಅಡ್ಡಿಪಡಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.2014ರಲ್ಲೂ ದೇವೇಗೌಡರು ಇದೇ ಮಾತನ್ನು ಹೇಳಿದ್ದರು. ಈಗ ಮತ್ತೆ ಇದೇ ಮಾತನ್ನು ಪುನರಾವರ್ತನೆ ಮಾಡುತ್ತಿದ್ದಾರೆ. ಇದು ಹುಡುಗಾಟಿಕೆಯ ಮಾತೇ ಹೊರತು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ದೇಶಕ್ಕೆ ಯಾರು ಬೇಕು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ನಾನು ಅಧಿಕಾರಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದು ಹೇಳುವುದ ಸರಿಯಲ್ಲ ಎಂದು ಎಸ್.ಎಂ.ಕೃಷ್ಣ ಆಕ್ಷೇಪಿಸಿದರು.
ನಾನು ಪ್ರಯತ್ನಿಸುತ್ತಿರುವೆ:
ನಾನು ಕಣ್ಣೀರು ಹಾಕಿ ಪ್ರಚಾರ ನಡೆಸಲು ಅನೇಕ ಬಾರಿ ಪ್ರಯತ್ನಿಸಿದ್ದೇನೆ. ಆದರೂ ನನಗೆ ಕಣ್ಣೀರೇ ಬರುವುದಿಲ್ಲ. ಕೆಲವರಿಗೆ ಕಣ್ಣೀರು ಹಾಕುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಕೃಷ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಕಣ್ಣೀರು ಹಾಕಿ ಮತದಾರರನ್ನ ಭಾವನಾತ್ಮಕವಾಗಿ ಸೆಳೆದು ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದ್ದಾರೆ. ಮತದಾರರು ಈಗ ಪ್ರಬುದ್ಧರಾಗಿದ್ದು, ಯಾರನ್ನು ಆಯ್ಕೆ ಮಾಡಬೇಕು ಎಂಬುದು ಅವರಿಗೂ ಗೊತ್ತಿದೆ ಎಂದರು.
ಕಣ್ಣೀರಿಗೆ ಮತದಾರರು ಕರುಗುವುದಿಲ್ಲ ಎಂದು ಟೀಕಿಸಿದರು:
ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ತಾವು ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಪರಿಜ್ಞಾನವೇ ಇಲ್ಲ. ಸೋಲಿನ ಹತಾಶೆ ಅವರಿಗೆ ಫಲಿತಾಂಶಕ್ಕೂ ಮುನ್ನವೇ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ, ಹಾಸನ ಹಾಗೂ ತುಮಕೂರಿನಲ್ಲಿ ತನ್ನ ಸಂಸಾರದವರನ್ನು ಗೆಲ್ಲಿಸಲು ನಾನಾ ಸರ್ಕಸ್ ನಡೆಸುತ್ತಿದ್ದಾರೆ.ಅದಕ್ಕಾಗಿ ಬೇರೊಬ್ಬರ ಮೇಲೂ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಸುಮಲತಾ ಅಂಬರೀಶ್ ರಕ್ಷಣೆ ಕೇಳಿದರೆ ಅಮೆರಿಕ ಅಧ್ಯಕ್ಷರಿಂದ ರಕ್ಷಣೆ ಪಡೆಯಿರಿ ಎಂದು ಹೇಳುವುದು ಸರಿಯೇ ? ಕಾರ್ಯಾಂಗದಡಿ ಕೆಲಸ ಮಾಡುವ ಅವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಪ್ರತಿಯೊಬ್ಬ ನಾಗರಿಕರಿಗೂ ರಕ್ಷಣೆ ಕೊಡುವುದು ಅವರ ಮೂಲಭೂತ ಕರ್ತವ್ಯ.ಕುಮಾರಸ್ವಾಮಿ ಅವರಿಗೆ ತಿಳಿಯದಿರುವುದು ಅತ್ಯಂತ ದುರದೃಷ್ಟಕರ ಎಂದು ಎಸ್.ಎಂ.ಕೃಷ್ಣ ಬೇಸರ ವ್ಯಕ್ತಪಡಿಸಿದರು.
ಮೋದಿ ಪ್ರಧಾನಿಯಾಗುವುದು ಖಚಿತ:
ಕೇಂದ್ರದಲ್ಲಿ ಈ ಬಾರಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಇದು ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ.ಭಾರತಕ್ಕೆ ಮೋದಿಯಂತಹ ಬಲಾಡ್ಯ ನಾಯಕ ಅಗತ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಸ್ವಚ್ಛ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ, ಸೇನಾಪಡೆಗೆ ಸಂಪೂರ್ಣ ಸ್ವತಂತ್ರ ನೀಡಿರುವುದು, ಪ್ರಬಲ ವಿದೇಶಾಂಗ ನೀತಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೋದಿ ಅವರು ಅಧಿಕಾರಕ್ಕೆ ಬರಲು ಅನುಕೂಲವಾಗಲಿದೆ. ವಿರೋಧ ಪಕ್ಷಗಳು ಏನೇ ಅಪಪ್ರಚಾರ ನಡೆಸಿದರೂ ದೇಶದ ಜನತೆ ಇದಕ್ಕೆ ಕಿವಿಗೊಡುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕರ ಅರವಿಂದ ಲಿಂಬಾವಳಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ವಿಧಾನಪರಿಷತ್ ಸದಸ್ಯ ಲೇಹರ್‍ಸಿಂಗ್, ಪಕ್ಷದ ಸಹ ವಕ್ತಾರರಾದ ಪ್ರಕಾಶ್, ಎ.ಎಚ್.ಆನಂದ್ ಉಪಸ್ಥಿತರಿದ್ದರು.