ಬೆಂಗಳೂರು,ಏ.16-ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮೂರನೇ ಬಾರಿ ಕರ್ನಾಟಕಕ್ಕೆ ಏ.19 ರಂದು ಭೇಟಿ ನೀಡುತ್ತಿದ್ದು, ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈಗಾಗಲೇ ಕಲಬುರಗಿ, ಕೋಲಾರ, ಚಿತ್ರದುರ್ಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡು ಸುತ್ತಿನ ಚುನಾವಣಾ ಪ್ರಚಾರ ನಡೆಸಿರುವ ರಾಹುಲ್ಗಾಂಧಿ ಮೂರನೇ ಬಾರಿಗೆ ಚಿಕ್ಕೋಡಿ, ಬೆಳಗಾವಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ಮೊದಲ ಹಂತದ ಚುನಾವಣೆ ಏ.18 ರಂದು ನಡೆಯಲಿದ್ದು, ಹಳೇ ಮೈಸೂರು ಭಾಗದ 14 ಜಿಲ್ಲೆಗಳಲ್ಲಿ ಮತದಾನ ಮುಗಿಯಲಿದೆ.ಎರಡನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ರಾಷ್ಟ್ರ ಮತ್ತು ರಾಜ್ಯ ನಾಯಕರು ಆ ಭಾಗದತ್ತ ಹೆಚ್ಚಿನ ಗಮನ ಹರಿಸಲಾರಂಭಿಸಿದ್ದಾರೆ.
ಹಳೇ ಮೈಸೂರು ಭಾಗದ 14 ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ನಾಯಕರು ಜಂಟಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳ ಪೈಕಿ ಶಿವಮೊಗ್ಗ ಮತ್ತು ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್ ಪಡೆದುಕೊಂಡಿದೆ. ಆ ಭಾಗದಲ್ಲೂ ಎರಡೂ ಪಕ್ಷಗಳ ನಾಯಕರು ಜಂಟಿ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಎರಡು ಲೋಕಸಭಾ ಕ್ಷೇತ್ರಗಳಿದ್ದು, ಈ ಎರಡರಲ್ಲೂ ರಾಹುಲ್ಗಾಂಧಿ ಚುನಾವಣಾ ಪ್ರಚಾರ ನಡೆಸುತ್ತಾರೆ.
ಪಕ್ಕದಲ್ಲಿರುವ ರಾಯಚೂರಿಗೂ ಹೆಲಿಕಾಪ್ಟರ್ ಮೂಲಕ ತೆರಳಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ಗಾಂಧಿ ರಸ್ತೆ ಮೂಲಕವೇ ಈ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ನಡೆಸಿದ್ದರು.
ಚುನಾವಣೆಯಲ್ಲಿ ಸಮಯ ಕಡಿಮೆ ಇರುವುದರಿಂದ ಬಹಿರಂಗ ಸಮಾವೇಶಗಳನ್ನು ಉದ್ದೇಶಿಸಿ ರಾಹುಲ್ಗಾಂಧಿ ಮಾತನಾಡಲಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ನ ರಾಜ್ಯ ನಾಯಕರು ರಾಹುಲ್ಗಾಂಧಿಯವರಿಗೆ ಸಾಥ್ ನೀಡಲಿದ್ದಾರೆ.
ಈ ನಡುವೆ ಪ್ರಿಯಾಂಕಾಗಾಂಧಿ ಕೂಡ ಏ.20 ರಂದು ಕಲಬುರಗಿಗೆ ಭೇಟಿ ನೀಡಿ ಮಲ್ಲಿಕಾರ್ಜುನ್ ಖರ್ಗೆ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.