ಬೆಂಗಳೂರು, ಏ.16- ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಐದು ವರ್ಷಗಳ ಆಡಳಿತದಲ್ಲಿ ದೇಶದ ಅರ್ಥಿಕತೆ ಸಬಲವಾಗಿದೆ ಎಂದು ಓವರ್ ಸೀಸ್ ಇಂಡಿಯಾ ಸಂಘಟನೆಯ ಮುಖ್ಯಸ್ಥ ರವಿಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ರಾಜಕೀಯ ಉದ್ದೇಶ ಹಾಗೂ ಪಕ್ಷದ ಪರ ಪ್ರಚಾರಕ್ಕಾಗಿ ಸಮೀಕ್ಷೆ ಮಾಡಿಲ್ಲ. ದೇಶದ ಹಿತದೃಷ್ಟಿಯಿಂದ ಸರಕಾರ ನೀಡಿರುವ ಉತ್ತಮ ಆಡಳಿತವನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ಸಾಮಾಜಿಕ, ಆರ್ಥಿಕ ಮಿಲಿಟರಿ ಶಕ್ತಿಯನ್ನು ಕೇಂದ್ರ ಸರಕಾರ ಹೆಚ್ಚಿಸಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ .ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಬಂದಿದ್ದು ಯಾವುದೆ ಕಪ್ಪು ಚುಕ್ಕೆ ಇಲ್ಲದ ಆಡಳಿತ ಎನ್‍ಡಿಎ ಸರಕಾರ ನೀಡಿದೆ ಎಂದು ತಿಳಿಸಿದರು.
ಐದು ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಮುಖ್ಯವಾಗಿ ಭಾರತದ ಪುರಾತನ ಪದ್ಧತಿಯಾದ ಯೋಗವನ್ನು ವಿಶ್ವ ಯೋಗ ದಿನಾಚರಣೆಯಾಗಿ ಇಡೀ ಜಗತ್ತಿಗೆ ಪರಿಚಯಿಸಿರುವುದು ಹೆಗ್ಗಳಿಕೆ ಪಾತ್ರವಾಗಿದೆ.ಡಾ. ಮನಮೋಹನ್ ಸಿಂಗ್ ಆಡಳಿತದಲ್ಲಿದ್ದ ಆರ್ಥಿಕತೆಗಿಂತ ಈಗ ಸಾಕಷ್ಟು ಬೆಳವಣಿಗೆ ಕಂಡು ಬಂದಿದೆ. ಸರಕು ಮತ್ತು ಸೇವೆಗಳ ಮೇಲೆ ನೇರ ತೆರಿಗೆಯಿಂದ (ಜಿಎಸ್‍ಟಿ) ದೇಶದ ಅಭಿವೃದ್ದಿ ಉತ್ತುಂಗ ಮಟ್ಟಕ್ಕೆ ತಲುಪಿದೆ. ಸಾಕಷ್ಟು ಜನಪರ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಯಾವುದೇ ಪಕ್ಷವಾಗಿರಲಿ ಪ್ರತಿಯೊಬ್ಬರೂ ಯೋಚನೆ ಮಾಡಿ ಉತ್ತಮ ನಾಯಕರನ್ನ ಆಯ್ಕೆ ಮಾಡಬೇಕಿದೆ.ಸಾಮಾಜಿಕ ಜಾಲತಾಣಗಳಲ್ಲಿ ಮತದಾನ ಅರಿವು ಕುರಿತು ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ.ದೇಶದ ಜನ ದಾಖಲೆ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಜಗತ್ತಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.