
ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಮಂಗಳವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಮಾಳೆಗಾಂವ, ಜಾಂಪಡ, ಔರಾದ್ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ಮತಯಾಚನೆ ಮಾಡಿದರು.
ರಾಷ್ಟ್ರೀಯ ಪಕ್ಷಗಳು ಕ್ಷೇತ್ರವನ್ನು ಕಡೆಗಣಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣಕ್ಕೆ ಇಳಿದಿರುವೆ. ಟ್ರ್ಯಾಕ್ಟರ್ ಚಿಹ್ನೆ ಹೊಂದಿರುವ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿ ಗಳು ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆ ಮಾಡುವ ಬದಲು, ಇಬ್ಬರು ಅಭ್ಯರ್ಥಿ ಗಳು ವಯಕ್ತಿಕ ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥವರನ್ನು ಗೆಲ್ಲಿಸಿಕೊಂಡು ಬಂದರೆ ಪ್ರಯೋಜನ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅಂಗವೈಕಲ್ಯ ಆದರು ಸಹ ನಾನು ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಯಶಸ್ವಿ ಯಾಗಿರುವೆ. ಅದೇ ರೀತಿ ರಾಜಕೀಯ ರಂಗದಲ್ಲಿ ಸಾಧನೆ ಮಾಡಲು ಅಂಗವಿಕಲನಾದ ನನಗೆ ಒಂದು ಬಾರಿ ಅವಕಾಶ ನೀಡಿ.ಅಭಿವೃದ್ಧಿಯಲ್ಲಿ ಕ್ಷೇತ್ರವನ್ನು ಅಂಗವಿಕಲರಂತೆ ಮಾಡಿದ ರಾಷ್ಟ್ರೀಯ ಪಕ್ಷ ಗಳಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಬೀದರ್ ಹಿಂದುಳಿದ ಕ್ಷೇತ್ರ. ನೀರಾವರಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನನಗೆ ಮತ ನೀಡುವ ಮೂಲಕ ಸಂಸತ್ ನಲ್ಲಿ ಬೀದರ್ ಧ್ವನಿ ಮೊಳಗಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.