ನವದೆಹಲಿ: ದ್ವೇಷ ಭಾಷಣ ಮಾಡಿದ ಕಾರಣಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಮೇಲೆ ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಂಡ ನಿಲುವನ್ನು ಸುಪ್ರೀಂಕೋರ್ಟ್ ಮಂಗಳವಾರ ಶ್ಲಾಘಿಸಿದೆ. ಕೊನೆಗೂ ಆಯೋಗ ತನ್ನ ಅಧಿಕಾರದ ಬಗ್ಗೆ ಎಚ್ಚೆತ್ತುಕೊಂಡಿದೆ ಎಂದು ಕೂಡ ಹೇಳಿದೆ.
ನ್ಯಾಯಪೀಠವು ಚುನಾವಣಾ ಆಯೋಗದ ಕ್ರಮದಿಂದ ತೃಪ್ತಿಗೊಂಡಿದೆ. ಕೊನೆಗೂ ನೀವು ನಿಮ್ಮ ಅಧಿಕಾರದ ಬಗ್ಗೆ ಎಚ್ಚೆತ್ತುಕೊಂಡಿರಿ. ನಿಮ್ಮ ಅಧಿಕಾರವನ್ನು ನೀವು ಮರಳಿ ಪಡೆದಿದ್ದಿರಾ. ಅಧಿಕಾರ ಇಲ್ಲ ಎಂಬುದರ ಬಗ್ಗೆ ನೀವು ನೋಡಬೇಡಿ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೇಳಿದರು.
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ನೆನ್ನೆ ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ತರಾಟೆ ತೆಗೆದುಕೊಂಡಿತ್ತು. ಆಯೋಗವನ್ನು ನ್ಯಾಯಾಲಯ ಸರಿಯಾಗಿ ಟೀಕಿಸಿದ ನಂತರ ಕಾರ್ಯಪ್ರವೃತ್ತವಾದ ಆಯೋಗ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೂರು ದಿನ ಚುನಾವಣಾ ಪ್ರಚಾರ ನಡೆಸದಂತೆ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಎರಡು ದಿನ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಿ, ಆದೇಶಿಸಿತ್ತು. ಇಂದು ಇದೇ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಚುನಾವಣಾ ಆಯೋಗ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದೆ.
ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಮಾಯಾವತಿ ಪರವಾಗಿ ಹಿರಿಯ ವಕೀಲ ದುಶ್ಯಂತ್ ದುವೆ ನ್ಯಾಯಾಲಯದ ಮುಂದೆ ಹಾಜರಾದರು. ಆಯೋಗದ ಆದೇಶವನ್ನು ಮಾಯಾವತಿ ಪ್ರಶ್ನೆ ಮಾಡುವುದಾದರೆ ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಈ ವೇಳೆ ನ್ಯಾಯಾಲಯ ದುಶ್ಯಂತ್ ದವೆ ಅವರಿಗೆ ತಿಳಿಸಿತು.