ಮಂಡ್ಯ, ಏ.16- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಹುದೆಂದು ಕೆಲವರು ಕನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು ತಗ್ಗಹಳ್ಳಿಯಲ್ಲಿ ಮಾತನಾಡುತ್ತ, ನಿಖಿಲ್ ಸೋಲಿಸಲು ಹಲವರು ಕುತಂತ್ರ ಮಾಡುತ್ತಿದ್ದಾರೆ. ಆ ಮೂಲಕ ತಮ್ಮನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವ ಕನಸು ಕಾಣುತ್ತಿದ್ದಾರೆ. ಯಾವುದೇ ಕುತಂತ್ರಗಳಿಗೆ ಒಳಗಾಗದೆ ನಿಖಿಲ್ ಪರವಾಗಿ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಸಾಕಷ್ಟು ಜನ ಷಡ್ಯಂತ್ರ ಮಾಡಿದ್ದಾರೆ. ತಮ್ಮ ಪುತ್ರನನ್ನು ಸೋಲಿಸುವ ಮೂಲಕ ಸರ್ಕಾರವನ್ನು ಪತನಗೊಳಿಸಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಹೇಶ್ ಎಂಬ ವ್ಯಕ್ತಿ ಚುನಾವಣಾ ಖರ್ಚಿಗಾಗಿ ಹಣ ಸಹಾಯ ಮಾಡಿದ್ದಾರೆ ಎಂದು ಅವರು ನೀಡಿದ್ದ ಪತ್ರವನ್ನು ವಾಚಿಸಿದರು. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಅತ್ಯಾಧುನಿಕ ರೀತಿಯಲ್ಲಿ ಪುನರಾರಂಭಿಸಲಾಗುತ್ತದೆ. ಮೈ ಶುಗರ್ ಸಕ್ಕರೆ ಕಾರ್ಖಾನೆ ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿಲ್ಲ. ಹೀಗಾಗಿ ಬಾಕಿ ಉಳಿಸಿಕೊಂಡಿದೆ. ಬಡವರ ಪರವಾಗಿ ಕೆಲಸ ಮಾಡುವವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಚುನಾವಣಾ ಪ್ರಚಾರಕ್ಕೂ ಮುನ್ನ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಖ್ಯಮಂತ್ರಿ ಪ್ರಚಾರ ಆರಂಭಿಸಿದರು. ಶಾಸಕ ರವೀಂದ್ರ ಶ್ರೀಕಂಠೇಗೌಡ ಸೇರಿದಂತೆ ಸ್ಥಳೀಯ ನಾಯಕರು, ಮುಖಂಡರು ಮುಖ್ಯಮಂತ್ರಿಗೆ ಸಾಥ್ ನೀಡಿದರು.