ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ

ಬೆಂಗಳೂರು, ಏ.16-ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಇಂದು ಹಾಸನ ಮತ್ತು ಮಂಡ್ಯದಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ದಳಪತಿಗಳಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.

ಹಾಸನದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರು ಹಾಗೂ ಮಂಡ್ಯದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸಂಬಂಧಿಕರು ಮತ್ತು ಬೆಂಬಲಿಗರು ಸೇರಿದಂತೆ ಹಲವಾರು ಕಡೆ ಐಟಿ ತಂಡ ಒಂದೇ ಹಂತದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಆದಾಯ ತೆರಿಗೆ ಇಲಾಖೆ ಕೇವಲ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಮತದಾನಕ್ಕೂ ಮುನ್ನ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಹಣದ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವರೆಂದೇ ಹೇಳಲಾಗುವ ಲೋಕೋಪಯೋಗಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಆಪ್ತರ ಮನೆಗಳ ಮೇಲೆ ಆರು ಕಡೆ ದಾಳಿ ನಡೆಸಲಾಗಿದೆ.

ಗೋವಾ ಮತ್ತು ಕರ್ನಾಟಕದ ಜಂಟಿ ತನಿಖಾ ತಂಡ ಏಕಕಾಲಕ್ಕೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಹೊಳೆನರಸೀಪುರದ ತಾ.ಪಂ. ಮಾಜಿ ಅಧ್ಯಕ್ಷ ನ್ಯಾಮನಹಳ್ಳಿ ಅನಂತ್‍ಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಬಂಧಿ ಹಾಗೂ ಜಿ.ಪಂ. ಮಾಜಿ ಸದಸ್ಯ ಹರದನಹಳ್ಳಿಯ ಪಾಪಣ್ಣಿ, ರೇವಣ್ಣ ಆಪ್ತ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ, ಗುತ್ತಿಗೆದಾರ ಕಾರ್ಲೆ ಇಂದ್ರೇಶ್, ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಅವರ ನಿವಾಸದ ಮೇಲೆ ದಾಳಿ ನಡೆದಿದೆ.

ದಾಳಿ ಸಂದರ್ಭದಲ್ಲಿ ತನಿಖಾಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೆಲವು ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಗುತ್ತಿಗೆದಾರರಿಗೆ ಮುಂಗಡವಾಗಿಯೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅದರಲ್ಲೂ ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲಿ ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಗುತ್ತಿಗೆದಾರರು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಐಟಿ ಇವರ ಮೇಲೆ ಎರಡು ತಿಂಗಳಿನಿಂದ ಹದ್ದಿನ ಕಣ್ಣಿಟ್ಟಿತ್ತು.

ದಾಳಿಗೆ ಒಳಗಾದವರು ಬಹುತೇಕ ಎಲ್ಲರೂ ರೇವಣ್ಣನವರ ಒಡನಾಡಿಗಳು ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಂಡವರು.

ಒಟ್ಟು ಮೂರು ತಂಡದಲ್ಲಿ 15 ಮಂದಿ ಐಟಿ ಅಧಿಕಾರಿಗಳು ಇನ್ನೋವಾ ಕಾರಿನಲ್ಲಿ ಆಗಮಿಸಿ ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ದಾಳಿ ನಡೆದಿರುವ ಬೆನ್ನಲ್ಲೇ ಸಕ್ಕರೆ ಜಿಲ್ಲೆ ಮಂಡ್ಯದಲ್ಲೂ ದಾಳಿಯಾಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಬೆಂಬಲಿಗರ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಪಾಂಡವಪುರದಲ್ಲಿರುವ ಪುಟ್ಟರಾಜು ಆಪ್ತ ತಿಮ್ಮೇಗೌಡ ಎಂಬುವರ ಮನೆ, ಪೆಟ್ರೋಲ್ ಬಂಕ್, ಕಚೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ಮಾಡಲಾಗಿದೆ.

ಮದ್ದೂರಿನಲ್ಲಿ ಜಿ.ಪಂ. ಅಧ್ಯಕ್ಷ ನಾಗರತ್ನ ಅವರ ಪತಿ ಶ್ರೀನಿಧಿ ಪ್ರತಿಷ್ಠಾನ ಅಧ್ಯಕ್ಷ ಎಸ್.ಪಿ.ಸ್ವಾಮಿ ಅವರ ಸೋಮನಹಳ್ಳಿಯಲ್ಲಿರುವ ಕೈಗಾರಿಕಾ ಪ್ರದೇಶದ ಮನೆಗೂ ಐಟಿ ದಾಂಗುಡಿ ಇಟ್ಟಿದೆ.

ಬೆಳಗಿನ ಜಾವ 5.30ರ ಸುಮಾರಿಗೆ ದಾಳಿ ನಡೆಸಲಾಗಿದ್ದು, ಮಂಡ್ಯದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದೆ.

ಮಂಡ್ಯದಲ್ಲಿ ಮತದಾನಕ್ಕೂ ಎರಡು ದಿನ ಮುನ್ನ ಭಾರೀ ಪ್ರಮಾಣದ ಹಣದ ವಹಿವಾಟು ನಡೆಯಲಿದೆ ಎಂಬ ಆರೋಪ ಕೇಳಿ ಬಂದಿತ್ತು.ಒಂದೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವುದು ಅವರ ಎದುರಾಳಿ ಅಭ್ಯರ್ಥಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಣಕ್ಕಿಳಿದಿರುವುದರಿಂದ ಈ ಜಿಲ್ಲೆ ರಾಜ್ಯದಲ್ಲೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರ ಎನಿಸಿದೆ.

ಇತ್ತೀಚೆಗೆ ಹಾಲಿ ಸಂಸದ ಶಿವರಾಮೇಗೌಡ ಮತ್ತು ಅವರ ಆಪ್ತರೊಬ್ಬರು ನಡೆಸಿದ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಪ್ರತಿ ಬೂತ್‍ಗೂ 5 ಲಕ್ಷ, ತಲಾ ಒಬ್ಬೊಬ್ಬರಿಗೆ 500 ರೂ. ಹಂಚಲಾಗುತ್ತದೆ ಎಂಬ ಸಂಭಾಷಣೆ ನಡೆದಿತ್ತು.

ಮತ್ತೊಂದೆಡೆ ಶಿವರಾಮೇಗೌಡ ಪುತ್ರ ಚೇತನ್‍ಗೌಡ ಹಾಗೂ ಪಿ.ರಮೇಶ್ ಎಂಬುವರು ಮಂಡ್ಯದಲ್ಲಿ 150 ಕೋಟಿ ಖರ್ಚು ಮಾಡಿಯಾದರೂ ಗೆದ್ದುಕೊಂಡು ಬರುತ್ತೇವೆ ಎಂದು ಸಂಭಾಷಣೆ ನಡೆಸಿದ್ದರು.

ಹಾಸನದಲ್ಲೂ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯಿಂದ ಎ.ಮಂಜು ಕಣಕ್ಕಿಳಿದಿರುವುದರಿಂದ ಇದೂ ಕೂಡ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ.

ಹಾಸನದಲ್ಲೂ ಮತದಾರರಿಗೆ ಆಮಿಷವೊಡ್ಡಲು ಭಾರೀ ಪ್ರಮಾಣದ ಹಣವನ್ನು ಹಂಚಲಾಗುತ್ತದೆ ಎಂಬ ಗುಸುಗುಸು ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆಸಿರುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಮಂಡ್ಯ, ಹಾಸನ ಹಾಗು ಮೈಸೂರಿನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದನ್ನು ವಿರೋಧಿಸಿ ದೋಸ್ತಿ ಪಕ್ಷಗಳ ಮುಖಂಡರು ಬೀದಿಗಿಳಿದಿದ್ದರು. ಬೆಂಗಳೂರಿನ ಐಟಿ ಕಚೇರಿ ಮುಂದೆ ಉಭಯ ಪಕ್ಷಗಳ ಮುಖಂಡರು ಕರ್ನಾಟಕ-ಗೋವಾ ಐಟಿ ವಿಭಾಗದ ಡಿಜಿ ಬಾಲಕೃಷ್ಣ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದರು.

ಇದರ ಬೆನ್ನಲ್ಲೇ ಐಟಿ ಇಲಾಖೆಯವರು ಚುನಾವಣಾ ಆಯೋಗಕ್ಕೆ ದೂರು ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರ ವಿರುದ್ಧ ದೂರು ನೀಡಿದ್ದರು.

ಇದೀಗ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಇವರೆಲ್ಲರಿಗೂ ನೋಟೀಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವಂತೆ ಐಟಿ ಚುನಾವಣಾ ಸಂದರ್ಭದಲ್ಲಿ ಭರ್ಜರಿ ಶಬ್ಧ ಮಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ