ರಾಜ್ಯದ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಬೆಂಗಳೂರು,ಏ.16-ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದ್ದು, ಇನ್ನೇನಿದ್ದರೂ ಮತದಾರರ ಮನ ಗೆಲ್ಲಲು ಮನೆ ಮನೆಗೆ ತೆರಳಬೇಕಾಗಿದೆ.

ಏ.18ರಂದು ಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರದ ಅಬ್ಬರ ಅಡಗಿದ್ದು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ, ಹಾಸನ, ಮೈಸೂರು, ಕೊಡಗು, ಉಡುಪಿ-ಚಿಕ್ಕಮಗಳೂರು, ಚಾಮರಾಜನಗರ, ದ.ಕನ್ನಡ ಜಿಲ್ಲೆಗಳಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಆಯೋಗ ಸಿದ್ಧತೆ, ಭದ್ರತೆ ಮಾಡಿಕೊಳ್ಳತೊಡಗಿದೆ.

ಇತ್ತ ಮತದಾರರ ಮನಗೆಲ್ಲಲು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಂತಿಮ ಕಸರತ್ತು ನಡೆಸಿವೆ. ಇಂದು ಸಂಜೆಯವರೆಗೆ ಬಹಿರಂಗ ಪ್ರಚಾರದಲ್ಲಿ ತೊಡಗಿದ ಅಭ್ಯರ್ಥಿಗಳು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದರು.ಪ್ರಚಾರದ ಅಬ್ಬರ ಮುಗಿಲು ಮುಟ್ಟಿತು.ಕೊನೆಕ್ಷಣದ ರ್ಯಾಲಿ, ಬಹಿರಂಗ ಸಮಾವೇಶ, ರೋಡ್ ಶೋಗಳು ಕ್ಷೇತ್ರಗಳ ವಿವಿಧೆಡೆ ನಡೆದವು. ವಿಶೇಷವಾಗಿ ರಣಕಣವಾಗಿ ಮಾರ್ಪಟ್ಟಿರುವ ಮಂಡ್ಯ, ಹಾಸನ, ತುಮಕೂರು ಮುಂತಾದೆಡೆ ಅಬ್ಬರದ ಪ್ರಚಾರ ನಡೆಯಿತು.ಅಭ್ಯರ್ಥಿಗಳು ವಿವಿಧ ಸಮುದಾಯಗಳವರನ್ನು ಓಲೈಸುವ ಕಸರತ್ತಿನಲ್ಲಿ ತೊಡಗಿದ್ದರು.

ವಿವಿಧ ಪಕ್ಷಗಳ ಮುಖಂಡರು, ಬೆಂಬಲಿಗರು ತಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.ಸ್ಥಳೀಯ ಮತದಾರರಲ್ಲದ ನಾಯಕರೂ ಸೇರಿದಂತೆ ಹೊರ ಕ್ಷೇತ್ರದವರೆಲ್ಲ ಇಂದು ಸಂಜೆಯೇ ಕ್ಷೇತ್ರಗಳನ್ನು ತೆರಳಬೇಕಾಗುತ್ತದೆ.

ನಾಳೆ ಬೆಳಗ್ಗೆಯಿಂದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದಾರೆ. ಕೊನೆ ಕ್ಷಣದಲ್ಲಿ ಮತದಾರರ ಓಲೈಕೆಗೆ ವಿವಿಧ ಆಮಿಷಗಳನ್ನು ಒಡ್ಡುವ ಸಾಧ್ಯತೆಯಿರುವುದರಿಂದ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.

ಇಂದು ಸಂಜೆಯಿಂದ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ