ರದ್ದಾಗಲಿದೆಯೇ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರ ಚುನಾವಣೆ…?

ಚೆನ್ನೈ: ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾಗಿದ್ದು, ಮತದಾರರ ವೋಲೈಕೆಗಾಗಿ ಕಂತೆ ಕಂತೆ ಹಣದ ಹೊಳೆ ಹರಿಸಲಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಡಿಎಂಕೆ ಮುಖಂಡರ ಮನೆಯಲ್ಲಿ ಕಳೆದ ಎರಡು ವಾರಗಳಿಂದ ನಡೆದ ಐಟಿ ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆಯಾಗಿದೆ. ಹಣದಿಂದ ಮತದಾರರನ್ನು ಓಲೈಸುವ ಪ್ರಯತ್ನ ನಡೆಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಚುನಾವಣಾ ಆಯೋಗವು ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ರದ್ದು ಮಾಡಲು ಅನುಮತಿ ಕೋರಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ. ರಾಷ್ಟ್ರಪತಿಗಳು ಪತ್ರಕ್ಕೆ ಸಹಿ ಹಾಕಿದರೆ ಚುನಾವಣೆ ರದ್ದಾಗಲಿದೆ.

ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರಂದು ನಡೆಯಲಿದೆ. ಅಷ್ಟೇ ಅಲ್ಲದೆ ವೆಲ್ಲೂರು ವ್ಯಾಪ್ತಿಯ ಅಂಬೂರ್ ಹಾಗೂ ಗುಡಿಯಾಟ್ಯಾಮ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಕೂಡ ನಡೆಯಲಿದೆ. ಆದರೆ ಈ ಎರಡೂ ಕ್ಷೇತ್ರಗಳ ಚುನಾವಣೆ ರದ್ದು ಮಾಡಲಾಗುತ್ತದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

ಡಿಎಂಕೆ ನಾಯಕ ದೊರೈ ಮುರುಗನ್ ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿಯ ಮಾಡಿತ್ತು. ಈ ವೇಳೆ ಅವರ ಗೋದಾಮಿನಲ್ಲಿ ಬರೋಬ್ಬರಿ 11.53 ಕೋಟಿ ರೂ. ಹಣ ಪತ್ತೆಯಾಗಿತ್ತು. ಹೀಗಾಗಿ ಈ ಹಣವು ದೊರೈ ಮುರುಗನ್ ಅವರಿಗೆ ಸೇರಿದ್ದು ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿದ್ದವು.

ಐಟಿ ದಾಳಿಯನ್ನು ಖಂಡಿಸಿದ್ದ ಡಿಎಂಕೆ ನಾಯಕರು, ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಆರೋಪಿಸಿದ್ದರು. ಇತ್ತ ದೊರೈ ಮುರುಗನ್ ಅವರು ಐಟಿ ರೇಡ್‍ನಿಂದ ಚುನಾವಣೆ ಪ್ರಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಗೆ ದೂರು ನೀಡಿದ್ದಾರೆ.

Election Commission wants Vellore polls cancelled

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ