ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಮೈಸೂರು, ಏ.16-ಕೇಂದ್ರದ ಬಿಜೆಪಿ ಸರ್ಕಾರ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡುತ್ತೇನೆ. ಪ್ರಧಾನಿ ಮೋದಿಯವರು ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಜನರ ಮುಂದಿಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.

ನಮ್ಮ ಸರ್ಕಾರದಲ್ಲಿನ ಹಲವು ಯೋಜನೆಗಳು ಈಗಿನ ಮೈತ್ರಿ ಸರ್ಕಾರದಲ್ಲೂ ಮುಂದುವರಿದಿದೆ. ಮೋದಿ ಅವರು ಹೇಳಿದ್ದಂತಹ ಜನ್‍ಧನ್, ಕಪ್ಪು ಹಣ ವಾಪಸ್ ತರುವುದು ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ದಲಿತರಿಗೆ ಗುತ್ತಿಗೆ ನೀಡುವಲ್ಲಿ ಮೀಸಲಾತಿ ತಂದಿದ್ದೇವೆ. ಆದರೆ ಕೇಂದ್ರದಲ್ಲಿ ಇಂತಹ ಯೋಜನೆಯನ್ನು ಈವರೆಗೆ ಏಕೆ ಜಾರಿಗೆ ತರಲಿಲ್ಲ? ಇದನ್ನು ನೋಡಿದರೆ ಬಿಜೆಪಿ ದಲಿತರ ಪರವಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿಯೇ ನಮಗೆ ದೊಡ್ಡ ವಿರೋಧಿ. ಅವರನ್ನು ಸೋಲಿಸುವುದೇ ನಮ್ಮ ಉದ್ದೇಶ. ಆದ್ದರಿಂದ ನಮ್ಮ ಕಾರ್ಯಕರ್ತರು ಶ್ರಮಿಸಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಹಾಗೂ ಮತದಾರರು ಕೂಡ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.

ಬಿಜೆಪಿಯ ಪ್ರಣಾಳಿಕೆ ಹಳೆಯ ವೈನ್ ಅನ್ನು ಹೊಸ ಬಾಟಲಿಗೆ ತುಂಬಿದಂತಿದೆ. ರೈತರಿಗೆ, ದಲಿತರಿಗೆ, ಜನಸಾಮಾನ್ಯರು, ಯುವಕರು, ಉದ್ಯೋಗಿಗಳಿಗೆ ಪ್ರಯೋಜನವಾಗದ ಪ್ರಣಾಳಿಕೆ ಎಂದು ಸಿದ್ದು ವ್ಯಂಗ್ಯವಾಡಿದರು.

ಮೋದಿ ತಾವು ಚೌಕಿದಾರ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ರೈತರು, ದಲಿತರು, ಬಡವರು, ಯೋಧರನ್ನು ಇದುವರೆಗೆ ಅವರು ಕಾದಿದ್ದಾರಾ ಎಂದು ಪ್ರಶ್ನಿಸಿದ ಅವರು, ಚೌಕಿದಾರ್ ಎಂದು ಹೇಳಿಕೊಳ್ಳುವ ನೈತಿಕತೆ ಪ್ರಧಾನಿಗೆ ಇಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಅವಧಿಯಲ್ಲಿ ಶೇ.7 ರಿಂದ ಶೇ.78ರಷ್ಟು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದು ಅಚ್ಛೇ ದಿನವೇ ಎಂದು ಖಾರವಾಗಿ ಪ್ರಶ್ನಿಸಿದರು.

300 ರೂ . ಇದ್ದ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ ಈಗ 800 ರೂ. ಆಗಿದೆ. ಅವರು ಹೇಳಿದ್ದ ಭರವಸೆ ಒಂದೂ ಈಡೇರಿಲ್ಲ. ಅಚ್ಛೆ ದಿನವೂ ಬಂದಿಲ್ಲ.

ಮಧ್ಯಮವರ್ಗದವರಿಗಾಗಲಿ, ಜನಸಾಮಾನ್ಯರಿಗಾಗಲಿ ಒಳಿತಾಗಿಲ್ಲ. ಇಂತಹ ಬಿಜೆಪಿಯನ್ನು ಏಕೆ ಜನರು ಬೆಂಬಲಿಸಬೇಕೆಂದು ಸಿದ್ದರಾಮಯ್ಯ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು 20 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ.

ನಮ್ಮೆರಡೂ ಪಕ್ಷಗಳ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ. ಆದರೆ ಒಂದೆರಡು ಕಡೆ ಸಾಮಾನ್ಯ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ.

ಅದು ಕೂಡ ಬಗೆಹರಿಯುವ ವಿಶ್ವಾಸವಿದೆ. ಇದನ್ನು ಬಿಟ್ಟರೆ ಜೆಡಿಎಸ್-ಕಾಂಗ್ರೆಸ್ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಮಾಧ್ಯಮ ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮಹೇಂದ್ರ, ಲೋಕೇಶ್ ಬಾಬು, ಸುಬ್ರಮಣ್ಯ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ