
ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣವೂ ಒಂದು. ಈ ಕ್ಷೇತ್ರ ಆರಂಭದಿಂದಲೂ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಬದಲಿಗೆ ಬಿಜೆಪಿ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಕಾರಣ ಎನ್ನಬಹುದು.
ತೇಜಸ್ವಿನಿ ಅನಂತಕುಮಾರ್ ಅವರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ ನೋವು ಇನ್ನೂ ಮನೆಮಾಡಿದೆ ಎನ್ನಲಾಗಿದೆ. ಕಳೆದ ಹಲವು ಚುನಾವಣೆಗಳಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ತೇಜಸ್ವಿನಿ ಅವರು, ಈ ಬಾರಿ ಅಷ್ಟೇ ಪ್ರಮಾಣದಲ್ಲಿ ಭಾಗಿಯಾಗದಿರುವುದು ಮತ್ತಷ್ಟು ಅನುಮಾನಕ್ಕೆ ಪುಷ್ಠಿ ನೀಡಿದೆ. ಇನ್ನು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಮುರಳೀಧರ್ ರಾವ್ ಅವರು ಒಮ್ಮೆ ಅನಂತಕುಮಾರ್ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ತೇಜಸ್ವಿನಿ ಅವರ ಮುನಿಸು ಬಹಿರಂಗವಾಗಿಯೇ ವ್ಯಕ್ತವಾಗಿತ್ತು. ಈ ವೇಳೆ ಅವರು ಹೆಚ್ಚು ಈ ಬಾರಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಸೂಚಿಸಿದರು.
ಈ ಮಧ್ಯೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ. ಸದ್ಯ ಕ್ಷೇತ್ರದಲ್ಲಿ ನೋಟಾ ಪರ ಮತ ಚಲಾಯಿಸುವಂತೆ ತೇಜಸ್ವಿನಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಡಿದೆ. ಈ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಗಾಳಿಸುದ್ದಿ ಬಗ್ಗೆ ಟ್ವಿಟ್ಟರ್‌ನಲ್ಲಿ ಖುದ್ದು ಸ್ಪಷ್ಟನೆ ನೀಡಿರುವ ತೇಜಸ್ವಿನಿ ಅನಂತ ಕುಮಾರ್ , ನೋಟಾ ಪರವಾಗಿ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.