ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಇನ್ನು ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ. ದೆಹಲಿ, ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನ ಸೇರಿ ವಾಯವ್ಯ ಭಾರತದ ಬಹುತೇಕ ಭಾಗಗಳಲ್ಲಿ ಏ. 15ರಿಂದ ಏ. 17ರವರೆ ಧೂಳು ಸಹಿತ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಭಾಗದ ಮೆಡಿಟೇರಿಯನ್ ಮಹಾಸಾಗರದಲ್ಲಿ ಎದ್ದಿರುವ ತಂಪು ಗಾಳಿಯೊಂದಿಗೆ ಹುಟ್ಟುವ ಬಿರುಗಾಳಿಯು ಉತ್ತರ ಮತ್ತು ವಾಯವ್ಯ ಭಾರತಕ್ಕೆ ಮಳೆಯನ್ನು ಹೊತ್ತು ತರಲಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಈಗಾಗಲೆ ಇಂತಹ ಮಳೆ ಆರ್ಭಟಿಸಿದೆ. ಮಂಗಳವಾರದವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ.
ಏ. 15ರಿಂದ ಪಶ್ಚಿಮ ಹಿಮಾಚಲ ಪ್ರದೇಶ ಮತ್ತು ವಾಯವ್ಯ ಭಾರತಕ್ಕೆ ಭಾರೀ ಹೊಡೆತ ಬೀಳಲಿದ್ದು, ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಚಂಡೀಗಢ ಮತ್ತು ಏ. 16ರಿಂದ ದೆಹಲಿ, ರಾಜಸ್ಥಾನ ಮತ್ತು ಉತ್ತರಪ್ರದೇಶಗಳಲ್ಲಿ ಗುಡುಗು ಮತ್ತು ಆಲಿಕಲ್ಲು ಸಹಿತ ಮಳೆಯಾಗಲಿದೆ.
ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಗಂಟೆಗೆ 50 ರಿಂದ 60 ಕಿಮೀ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿ ಹೊಡೆತಕ್ಕೆ ಬಿಹಾರ, ಕೇರಳ, ಕರ್ನಾಟಕದ ಒಳನಾಡು, ತೆಲಂಗಾಣ, ಜಾರ್ಖಂಡ್, ಮಹಾರಾಷ್ಟ್ರದ, ಮರಾಠವಾಡಾ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಸಿಲುಕಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ದೇಶದ ಹಲವಾರು ಭಾಗಗಳು ಗುಡುಗು ಸಹಿತ ಮಳೆಯ ಹೊಡೆತಕ್ಕೆ ಸಿಲುಕಬಹುದು, ಇದು ಏ. 16 ಮತ್ತು 17ರಂದು ವಾಯವ್ಯ ಭಾರತದಲ್ಲಿ ತೀವ್ರಗೊಳ್ಳಬಹುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಚರಣ್ ಸಿಂಗ್ ತಿಳಿಸಿದ್ದಾರೆ.
Thundershowers, dust storm likely to hit north India from April 15 to 17