ಬೆಂಗಳೂರು, ಏ.14 -ಚಿತ್ರದುರ್ಗಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮೊಂದಿಗೆ ತಂದಿದ್ದ ಬಾಕ್ಸ್ ನಲ್ಲಿ ಏನಿತ್ತು ಎಂದು ಜನರಿಗೆ ತಿಳಿಸಬೇಕು ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಚಿತ್ರದುರ್ಗ ಪ್ರಚಾರಕ್ಕೆ ಬಂದಾಗ ಅವರ ಹೆಲಿಕಾಪ್ಟರ್ನಿಂದ ಒಂದು ಬಾಕ್ಸ್ ನ್ನು ತೆಗೆದುಕೊಂಡು ಹೋಗಿ ಇನ್ನೋವಾ ಕಾರಿನಲ್ಲಿಡಲಾಗಿದೆ. ಮೋದಿಯವರು ಅದರಲ್ಲಿ ಏನು ತಂದಿದ್ದರು ಎಂಬುದು ಗೊತ್ತಿಲ್ಲ. ರಾಜ್ಯದ ಜನರಿಗೆ ಸ್ವೀಟ್ ತಂದಿದ್ದರಾ, ಸೀರೆಗಳನ್ನು ತಂದಿದ್ದರಾ, ಪಾಕಿಸ್ತಾನದಿಂದ ಈ ಹಿಂದೆ ಮೋದಿಯವರು ಸೀರೆಗಳನ್ನು ತಂದಿದ್ದರು. ಆ ರೀತಿ ಏನಾದರೂ ತಂದಿದ್ದರಾ ಅಥವಾ ಕೊಡಗಿನಲ್ಲಿ ನೆರೆ ಹಾವಳಿಯಿಂದ ಉಂಟಾಗಿರುವ ಸಾವಿರಾರು ರೂ.ನಷ್ಟಕ್ಕೆ ಪರಿಹಾರ ರೂಪದಲ್ಲಿ ಹಣವನ್ನು ಏನಾದರೂ ತಂದಿದ್ದರಾ ಎಂಬ ಪ್ರಶ್ನೆಗಳು ಜನರಲ್ಲಿ ಕಾಡುತ್ತಿವೆ. ಅದಕ್ಕೆ ಪ್ರಧಾನಿಯವರೇ ಉತ್ತರ ನೀಡಬೇಕು. ಈ ವಿಚಾರವನ್ನು ಚುನಾವಣಾ ಆಯೋಗಕ್ಕೂ ದೂರಿನ ಮೂಲಕ ತಿಳಿಸುತ್ತೇವೆ ಎಂದರು.
ಚುನಾವಣಾ ಆಯೋಗ ಪ್ರಧಾನಿಯವರು ತಂದಿದ್ದ ಬಾಕ್ಸನ್ನು ಪರಿಶೀಲನೆ ಮಾಡಿದೆಯೇ, ಇಲ್ಲವೇ ಎಂಬ ಬಗ್ಗೆಯೂ ಸ್ಪಷ್ಟಪಡಿಸಬೇಕು. ಖುದ್ದಾಗಿ ಇದಕ್ಕೆ ಪ್ರಧಾನಿಯವರೇ ಉತ್ತರ ನೀಡಬೇಕೆಂದು ಅವರು ಒತ್ತಾಯಿಸಿದರು.