ಬೆಂಗಳೂರು, ಏ.14-ಭಾರತಕ್ಕೆ ಸಂವಿಧಾನ ರಚಿಸಿಕೊಟ್ಟ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ದೇಶನಾಯಕ, ಜನ ನಾಯಕನಾಗಿ ಬಿಂಬಿಸದೆ ಒಬ್ಬ ಜಾತಿ ನಾಯಕನಾಗಿ ಬಿಂಬಿಸಿರುವುದು ವಿಷಾದನೀಯ ಎಂದು ವಿಶ್ರಾಂತ ನ್ಯಾಯ ಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಗಾಂಧಿಭವನದಲ್ಲಿ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ ಹಾಗೂ ಎಐಟಿಯುಸಿ, ಬೆಂಗಳೂರು ಜಿಲ್ಲಾ ಮಂಡಳಿ ಭಾರತೀಯ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಸಂವಿಧಾನ ಮತ್ತು ಕಾರ್ಮಿಕ ವರ್ಗ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಶೋಷಣೆಗೆ ಒಳಗಾದ ಜನರಲ್ಲಿ ಧೈರ್ಯ ತುಂಬಿ, ನ್ಯಾಯಕ್ಕಾಗಿ ಹೋರಾಡಿದ ಮಹಾನ್ ನಾಯಕರು ಎಂದು ಸ್ಮರಿಸಿದರು.
ದಲಿತ ಸಮುದಾಯಕ್ಕೆ ಮಹಾನ್ ಕೊಡುಗೆ ನೀಡಿದ್ದಲ್ಲದೆ, ಭಾರತದಲ್ಲಿ ಮಹಿಳೆಯರ ಹಿತಕ್ಕಾಗಿ ಶ್ರಮಿಸಿದವರು. ಹಿಂದು ಧರ್ಮದಲ್ಲಿ ಮಹಿಳೆಯರಿಗೆ ಆಸ್ತಿಹಕ್ಕು, ಮದುವೆ, ದತ್ತು ಮಕ್ಕಳ ರಕ್ಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮಹಿಳೆಯರ ಹಿತಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಹಾನ್ ವ್ಯಕ್ತಿಯಾಗಿರುವ ಅಂಬೇಡ್ಕರ್ ಅವರನ್ನು ಜಾತಿ ನಾಯಕ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇತ್ತೀಚಿನ ವಿದ್ಯಾರ್ಥಿಗಳು ಸಂವಿಧಾನವನ್ನು ಪರೀಕ್ಷೆ ದೃಷ್ಟಿಯಿಂದ ಅಷ್ಟೆ ಅಧ್ಯಯನ ಮಾಡದೆ ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಪತ್ರಕರ್ತ ಸಿದ್ದನಗೌಡ ಪಾಟೀಲ್, ಎಐಟಿಯುಸಿ ಪ್ರಧಾನಕಾರ್ಯದರ್ಶಿ ಎಂ.ಡಿ.ಹರಿಗೋವಿಂದ,ಮುರುಳೀಧರ್ ಉಪಸ್ಥಿತರಿದ್ದರು.