ಲಖನೌ: ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಿಂದ ಸ್ಪರ್ಧಿಸುವ 9 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಈಗಾಗಲೇ ಶನಿವಾರ ಬಿಡುಗಡೆ ಮಾಡಿದೆ. ಆದರೆ, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ಮೂಲಕ ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸುತ್ತಾರೆಯೇ ಎನ್ನುವ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.
ವಾರಾಣಸಿ ಅಲ್ಲದೆ, ಲಖನೌನಿಂದ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಅಂತಿಮ ತೀರ್ಮಾನ ಕೈ ಪಾಳಯದಲ್ಲಿ ಆಗಿಲ್ಲ. ಈ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗಾಗಿ, ಬಲಿಷ್ಠ ನಾಯಕನನ್ನು ಕಣಕ್ಕೆ ಇಳಿಸಬೇಕು ಎನ್ನುವ ಆಲೋಚನೆ ಕೈ ನಾಯಕರದ್ದು.
ಬಾಲಿವುಡ್ ಕಲಾವಿದ ಹಾಗೂ ಮಾಜಿ ಬಿಜೆಪಿ ಸಂಸದ ಶ್ರತ್ರುಘ್ನ ಸಿನ್ಹಾ ಪತ್ನಿ ಪೂನಮ್ ಸಿನ್ಹಾ ಪಾಟ್ನಾ ಸಾಹಿಬ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. ಇವರು ಕಾಂಗ್ರೆಸ್ ಬೆಂಬಲದ ಜೊತೆಗೆ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯೂ ಇದೆಯಂತೆ.
ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಈ ವೇಳೆ ಕಾಂಗ್ರೆಸ್ಗೆ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಏಂಕಾಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ. ಅಷ್ಟೇ ಅಲ್ಲ, ಮೈತ್ರಿ ವಿರುದ್ಧ ಪ್ರಮುಖ ನಾಯಕರನ್ನು ಕಣಕ್ಕೆ ಇಳಿಸುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಅಖಾಡಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಣ್ಣಿಟ್ಟಿವೆ. ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರಪ್ರದೇಶ ಪೂರ್ವ) ಜವಾಬ್ದಾರಿ ತೆಗೆದುಕೊಂಡಿರುವ ಪ್ರಿಯಾಂಕಾ ಸಾಕಷ್ಟು ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.