ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಬಿಜೆಪಿ ಮುಖಂಡರು ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ನಗರದ ಸಿದ್ಧಾರೂಢ ಶಕ್ತಿ ಕೇಂದ್ರದಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದ ಮುಖಂಡರು, ದೇಶಾದ್ಯಂತ ಎದ್ದಿರುವ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. 2014 ಕ್ಕಿಂತ ಹತ್ತು ಪಟ್ಟು ಈ ಚುನಾವಣೆ ಯಲ್ಲಿ ಮೋದಿ ಅಲೆ ಇದೆ. ಈ ಬಾರಿ ಕಾಂಗ್ರೆಸ್ ನವರು ತಮ್ಮ ಠೇವಣಿ ಉಳಿಸಲು ಹೋರಾಟ ನಡೆಸಬೇಕಾಗಿದೆ ಎಂದು ಮುಖಂಡರು ಹೇಳಿದರು.
ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕಾದರೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಐದು ವರ್ಷಗಳ ಖೂಬಾ ಸಾಧನೆ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕೆಲಸ ನೋಡಿ ಮತ ನೀಡಿ ಎಂದು ಮನವಿ ಮಾಡಿದರು.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ12 ರಾಷ್ಟ್ರೀಯ ಹೆದ್ದಾರಿ, 13 ಹೊಸ ರೈಲು ಗಳು ತಂದಿರುವ ಖ್ಯಾತಿ ಖೂಬಾ ಅವರಿಗೆ ಸಲ್ಲುತ್ತದೆ. ಇಷ್ಟೊಂದು ಹೆದ್ದಾರಿ, ರೈಲು ಬೇರೆ ಯಾರೊಬ್ಬ ಸಂಸದರು ತಂದಿಲ್ಲ. ನಿರೀಕ್ಷೆಗೂ ಮೀರಿ ಖೂಬಾ ಕೆಲಸ ಮಾಡಿದ್ದಾರೆ. ಆದರೆ ವಿರೋಧ ಪಕ್ಷಗಳು ಖೂಬಾ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಫಸಲ್ ಬಿಮಾ ಯೋಜನೆಯಡಿ150 ಕೋಟಿಗೂ ಅಧಿಕ ಹಣ ಬೀದರ್ ಗೆ ಬಂದಿದೆ. ಈ ಖ್ಯಾತಿ ಖೂಬಾ ಅವರಿಗೆ ಸಲ್ಲುತ್ತದೆ. ದೇಶದಲ್ಲಿ ಇಷ್ಟೊಂದು ಅಧಿಕ ಹಣ ಯಾರು ತಂದಿಲ್ಲ. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಬೀದರ್ ಸಮಗ್ರ ಅಭಿವೃದ್ಧಿ ಗೆ ಖೂಬಾ ಅವರಿಗೆ ಇನ್ನೊಂದು ಬಾರಿ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಬೀದರ್ ವಿಧಾನಸಭಾ ಕ್ಷೇತ್ರದ ಸಂಚಾಲಕ ಬಾಬು ವಾಲಿ, ನಗರಸಭೆ ಸದಸ್ಯ ಚಂದ್ರಶೇಖರ ಪಾಟೀಲ್ ಗಾದಗಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ರಾಜಕುಮಾರ ಚಿದ್ರಿ, ಶಶಿ ಹೊಸಳ್ಳಿ, ಹಣಮಂತ ಬುಳ್ಳಾ, ಅರುಣ ಬಸವನಗರ, ರಾಜು ಘಂಟಿ ಇತರರು ಇದ್ದರು.