ಭಿನ್ನಮತೀಯರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೈಕಮಾಂಡ್ ಸಜ್ಜು

ಬೆಂಗಳೂರು,ಏ.14-ಪಕ್ಷದ ವರಿಷ್ಠರ ಆದೇಶವನ್ನು ಧಿಕ್ಕರಿಸಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಹಿಂದೇಟು ಹಾಕಿರುವ ಭಿನ್ನಮತೀಯರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೈಕಮಾಂಡ್ ಸಜ್ಜಾಗಿದೆ.

ಮೇ 23ರ ಫಲಿತಾಂಶದ ನಂತರ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ರೆಬೆಲ್‍ಗಳಿಗೆ ತಕ್ಕ ಶಾಸ್ತಿ ಮಾಡಲು ವರಿಷ್ಠರು ಚಿಂತಿಸಿದ್ದಾರೆ ಎಂದು ಹೇಳಲಾಗಿದೆ.

ಚುನಾವಣಾ ಸಂದರ್ಭದಲ್ಲಿ ಭಿನ್ನಮತೀಯರ ವಿರುದ್ದ ಶಿಸ್ತು ಕ್ರಮ ಜರುಗಿಸಿದರೆ ಕೆಟ್ಟ ಸಂದೇಶ ಹೋಗಬಹುದು ಎಂಬ ಕಾರಣಕ್ಕಾಗಿ ಯಾವುದೆ ಕ್ರಮ ಕೈಗೊಳ್ಳದೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ಸಮ್ಮಿಶ್ರ ಸರ್ಕಾರಕ್ಕೆ ಹಿನ್ನೆಡೆಯಾದರೆ ರೆಬೆಲ್‍ಗಳ ಮೇಲೆ ಅಂದೇ ಶಿಸ್ತು ಕ್ರಮ ಜಾರಿಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಭಿನ್ನಮತೀಯರು ಅಭ್ಯರ್ಥಿಗಳ ಪರ ಮತಯಾಚನೆ ಮಾಡಿಲ್ಲ ಎಂಬುದನ್ನು ಕೆಪಿಸಿಸಿ ಈಗಾಗಲೇ ಪಟ್ಟಿ ಮಾಡಿಕೊಂಡಿದೆ. ಅಂತಹ ಜಿಲ್ಲೆಯಲ್ಲಿ ಅಧಿಕೃತ ಅಭ್ಯರ್ಥಿಗಳು ಪರಾಭವಗೊಂಡರೆ ಅದಕ್ಕೆ ಇವರೇ ಕಾರಣ ಎಂಬುದು ಖಾತ್ರಿಯಾಗುತ್ತದೆ.

ಅದರಲ್ಲೂ ವಿಶೇಷವಾಗಿ ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೇಲ್ನೋಟಕ್ಕೆ ಮಾತ್ರ ದೋಸ್ತಿ ಹೊರಗಡೆ ಕುಸ್ತಿ ಎಂಬಂತಾಗಿದೆ.

ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಪರಾಬವವಗೊಂಡರೆ ಅದರ ಹೊಣೆಯನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರೇ ಹೊರಬೇಕು.

ಅದರಲ್ಲೂ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಬಳ್ಳಾರಿ ಶಾಸಕರಾದ ಬಿ.ನಾಗೇಂದ್ರ, ಅಗರಿಬೊಮ್ಮನಹಳ್ಳಿಯ ಭೀಮನಾಯಕ್, ಆನಂದ್ ಸಿಂಗ್ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಾಗೇಪಲ್ಲಿಯ ಸುಬ್ಬಾರೆಡ್ಡಿ ಸೇರಿದಂತೆ ಅನೇಕರ ವಿರುದ್ದ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ.

ಮಂಡ್ಯದಲ್ಲಿ ನಿಖಿಲ್‍ಕುಮಾರಸ್ವಾಮಿ ಪರ ಪ್ರಚಾರ ನಡೆಸುವಂತೆ ಚೆಲುವರಾಯಸ್ವಾಮಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಖುದ್ದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೂಚಿಸಿದ್ದರು.

ಮೊದಲು ಎಲ್ಲ ಮುಖಂಡರನ್ನು ಮನೆಗೆ ಕರೆಸಿಕೊಂಡು ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಬೇಕೆಂದು ಮನವಿ ಮಾಡಿದ್ದರು.

ಅಲ್ಲದೆ ಮಂಡ್ಯ ಜಿಲ್ಲೆಯಲ್ಲಿ ನಾನು ಜೆಡಿಎಸ್ ವರಿಷ್ಠರನ್ನು ಮಾಜಿ ಪ್ರಧಾನಿ ದೇವೆಗೌಡರು ಜಂಟಿ ಪ್ರಚಾರ ನಡೆಸುವ ವೇಳೆ ಎಲ್ಲ ಮುಖಂಡರು ಕಡ್ಡಾಯವಾಗಿ ಹಾಜರರಿಬೇಕೆಂದು ಕೆಪಿಸಿಸಿ ಕೂಡ ತಾಕೀತು ಮಾಡಿತ್ತು. ಜೊತೆಗೆ ಶನಿವಾರ ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದ ವೇಳೆ ಒಗ್ಗಟ್ಟು ಪ್ರದರ್ಶಿಸಿ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂಬ ಸಂದೇಶವನ್ನು ರವಾನಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಲ್ಲರಿಗೂ ಮನವಿ ಮಾಡಿಕೊಂಡಿದ್ದರು.

ಆದರೆ ಇದಾವುದಕ್ಕೂ ಸೊಪ್ಪು ಹಾಕದ ಚೆಲುವರಾಯಸ್ವಾಮಿ ಮತ್ತವರ ಬೆಂಬಲಿಗರು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮತಯಾನೆ ಮಾಡುವ ಬದಲು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಿಲ್ಲುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಬೆಳಗಾವಿಯಲ್ಲೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿಯ ಮಹೇಶ್ ಕುಮಟಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸುತ್ತಿಲ್ಲ ಚಿಕ್ಕೋಡಿ ಮತ್ತು ಬೆಳಗಾವಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಕಾಶ್ ಹುಕ್ಕೇರಿ ಹಾಗು ಡಾ.ಸಾಧುನವರ್ ಪರವಾಗಿ ಎಲ್ಲಿಯೂ ಪ್ರಚಾರ ನಡೆಸದೆ ಚುನಾವಣಾ ಪ್ರಕ್ರಿಯೆಯೊಂದಿಗೆ ದೂರ ಉಳಿದಿದ್ದಾರೆ.

ಇತ್ತ ಗಣಿ ಜಿಲ್ಲೆಯಲ್ಲಿ ಬಳ್ಳಾರಿಯಲ್ಲೂ ಕಾಂಗ್ರೆಸ್‍ನ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. 2ನೇ ಹಂತದ ಮತದಾನಕ್ಕೆ 8 ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ.ಉಗ್ರಪ್ಪ ಕೂಡ ಯಾರೊಬ್ಬರೂ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿಲ್ಲ. ಬದಲಿಗೆ ಕಾಲೆಳೆಯುವಿಕೆಯಲ್ಲಿ ತೊಡಗಿದ್ದಾರೆ.

ರೆಸಾರ್ಟ್‍ನಲ್ಲಿ ಬಡಿದಾಡಿಕೊಂಡ ಪರಿಣಾಮ ಜೆ.ಎನ್.ಗಣೇಶ್, ಜೈಲು ಪಾಲಾಗಿದ್ದರೆ ಹಾಸಿಗೆ ಹಿಡಿದಿರುವ ಆನಂದ್ ಸಿಂಗ ಪ್ರಚರಕ್ಕೆ ಹೋಗುತ್ತಿಲ್ಲ.

ಕಾಂಗ್ರೆಸ್‍ನಲ್ಲೇ ಇದ್ದರೂ ಬಿಜೆಪಿ ಕದ ತಟ್ಟಿರುತ್ತಿರುವ ನಾಗೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಪ್ರಚಾರ ನಡೆಸುತ್ತಿದ್ದಾರೆ.

ಬರ ಜಿಲ್ಲೆ ಕೋಲಾರದಲ್ಲೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಕೆ.ಎಚ್‍ಮುನಿಯಪ್ಪ ಅವರಿಗೆ ಬೆಂಬಲ ಕೊಡುತ್ತಿಲ್ಲ. ಹೀಗೆ ಯಾವ ಯಾವ ಜಿಲ್ಲೆಗಳಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಭಿನ್ನಮತೀಯರಿಗೆ ಫಲಿತಾಂಶ ಪ್ರಕಟಗೊಂಡ ಮರುದಿನವೇ ಶಿಸ್ತುಕ್ರಮದ ಅಸ್ತ್ರ ಬೀಳುವುದು ಗ್ಯಾರಂಟಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ