ಬೆಂಗಳೂರು, ಏ.13-ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಮತದಾರರಿಗೂ ನಾಳೆಯೊಳಗೆ ವೋಟರ್ಸ್ಲಿಪ್ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಏ.18 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೋಟರ್ಸ್ಲಿಪ್ ಜತೆಗೆ ವೋಟರ್ಗೈಡ್ ಕೊಡುತ್ತಿದ್ದೇವೆ. ಈಗಾಗಲೇ ಶೇ.78ರಷ್ಟು ವಿತರಣೆ ಮಾಡಿದ್ದೇವೆ. ಉಳಿದದ್ದನ್ನು ಇಂದು, ನಾಳೆಯೊಳಗೆ ಪೂರ್ಣಗೊಳಿಸುತ್ತೇವೆ ಎಂದರು.
ಇದರ ಜತೆಗೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಿರುವ ಯುವ ಮತ್ತು ಹೊಸ ಮತದಾರರಿಗೂ ಗುರುತಿನ ಚೀಟಿ ಕೊಡುತ್ತೇವೆ. ಕೆಲವೆಡೆ ಮತದಾರರು ಮನೆಯಲ್ಲಿರುವುದಿಲ್ಲ. ಹಾಗಾಗಿ ಬಾಕಿ ಇದೆ ಅದನ್ನು ಕೂಡ ನಾಳೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗಾಗಿ 8514 ಮತಗಟ್ಟೆ ಸ್ಥಾಪನೆ ಮಾಡಿದ್ದೇವೆ. ಚುನಾವಣಾ ಕಾರ್ಯಕ್ಕೆ 45 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದೇವೆ. ಅವರಿಗೆಲ್ಲ ತರಬೇತಿ ಕೂಡ ನೀಡಿದ್ದೇವೆ ಎಂದರು.
ಆದರೆ ತರಬೇತಿಗೆ ಕೆಲವರು ಹೇಳದೆ ಕೇಳದೆ ಗೈರು ಹಾಜರಾಗಿದ್ದಾರೆ. ಅವರಿಗೆ ನೋಟೀಸ್ ನೀಡಿದ್ದೇವೆ. ಯಾರು ಗೈರಾಗಿರುತ್ತಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದೇವೆ ಎಂದು ಹೇಳಿದರು.
ಶೇ.15ರಷ್ಟು ಮಂದಿ ಚುನಾವಣಾ ತರಬೇತಿಗೆ ತಪ್ಪಿಸಿಕೊಂಡಿದ್ದಾರೆ. ಹಾಗಾಗಿ ನಾವು ಹೊಸಬರನ್ನು ಚುನಾವಣಾ ಕಾರ್ಯಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಜತೆಗೆ ಶೇ.10ರಷ್ಟು ಹೊಸ ಸಿಬ್ಬಂದಿಗೆ ನಾವು ನಾಳೆ ತರಬೇತಿ ಕೊಡುತ್ತಿದ್ದೇವೆ. ಇವರನ್ನು ಹೆಚ್ಚು ಮತದಾರರು ಇರುವ ಕಡೆ ಬಳಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಒಟ್ಟಾರೆ 18 ರಂದು ನಡೆಯುವ ಮತದಾನದಂದು ಯಾವುದೇ ಗೊಂದಲವಾಗದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.