ಬೆಂಗಳೂರು, ಏ.13-ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಆದರೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಕಲಿದ್ದಲು ಖರೀದಿ, ಎಲೆಕ್ಟಾಪ್ಟರ್ ಖರೀದಿ, ತರಂಗ ಗುಚ್ಛ ಹರಾಜು, ಕಾಮನ್ವೆಲ್ತ್ ಕ್ರೀಡಾಕೂಟದ ಕಾಮಗಾರಿ, ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆಸಿದರು ಎಂದು ಆರೋಪಿಸಿದರು.
ಕಳೆದ ಐದು ವರ್ಷಗಳಲ್ಲಿ ಯಾವ ಹಗರಣವೂ ನಡೆದಿಲ್ಲ. ಪ್ರಧಾನಿಯಾಗಲಿ ಅಥವಾ ಅವರ ಸಚಿವ ಸಂಪುಟದ ಯಾವ ಸಚಿವರೇ ಆಗಲಿ ಭ್ರಷ್ಟಾಚಾರ ನಡೆಸಿಲ್ಲ ಎಂದು ಹೇಳಿದರು.
ಭಯೋತ್ಪಾದನೆ ವಿರುದ್ಧ ನರೇಂದ್ರ ಮೋದಿ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ.ಜಿಎಸ್ಟಿ ಜಾರಿ ಮಾಡಿ ಏಕರೂಪ ತೆರಿಗೆ ತಂದಿದ್ದಾರೆ. ಕಪ್ಪು ಹಣಕ್ಕೆ ಕಡಿವಾಣ ಹಾಕಿದ್ದಾರೆ.ಜನಪರ ಆಡಳಿತ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ನಾನು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಇದರಿಂದಾಗಿ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ.ಇದನ್ನು ಸಹಿಸದ ಕಾಂಗ್ರೆಸಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಬಜೆಟ್ನಲ್ಲಿ 17 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ.ಮೆಟ್ರೋ 2ನೇ ಹಂತಕ್ಕೆ ಕೇಂದ್ರ ಸರ್ಕಾರ ಬೆನ್ನೆಲುಬಾಗಿ ನಿಂತಿದೆ.ಆದ್ದರಿಂದ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಸಚಿವನಾಗಿ ನಾನು ರಾಜ್ಯ ಮತ್ತು ಕೇಂದ್ರದ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಹಲವು ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದೇನೆ. ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಬಿಬಿಎಂಪಿ, ಬಿಡಿಎ , ರಾಜ್ಯ ಸರ್ಕಾರಕ್ಕೆ ಬಿಡಿಸಿಕೊಡಲು ಕೇಂದ್ರ ರಕ್ಷಣಾ ಸಚಿವರನ್ನೇ ಬೆಂಗಳೂರಿಗೆ ಕರೆಸಿದ್ದನ್ನು ಕಾಂಗ್ರೆಸಿಗರು ಮರೆತಂತಿದೆ ಎಂದು ಲೇವಡಿ ಮಾಡಿದರು.
ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿಯಲ್ಲಿ ಪಾಸ್ಪೋರ್ಟ್ ಕಚೇರಿ ತೆರೆಯಲಾಗಿದೆ.ಇಷ್ಟೆಲ್ಲಾ ಮಾಡಿದ್ದರೂ ಕೃಷ್ಣಭೆರೇಗೌಡರು ನಾನು ಏನು ಮಾಡಿದ್ದೇನೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಇದನ್ನೆಲ್ಲ ಗಮನಿಸಲಿ ಎಂದು ತಿರುಗೇಟು ನೀಡಿದರು.