ಬೆಂಗಳೂರು, ಏ.13-ನಾಡಿನೆಲ್ಲೆಡೆ ಇಂದು ಶ್ರೀರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಇಂದು ಬೆಳಗಿನಿಂದಲೇ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಮೈಸೂರು ರಸ್ತೆಯಲ್ಲಿರುವ ಶ್ರೀ ಗಾಳಿ ಆಂಜನೇಯ ದೇವಾಲಯದಲ್ಲಿ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದು.
ರಾಜಾಜಿನಗರದ ಶ್ರೀರಾಮಸೇವಾ ಮಂಡಳಿ ವತಿಯಿಂದ 63ನೇ ವರ್ಷದ ರಾಮೋತ್ಸವ ಹಮ್ಮಿಕೊಂಡಿದ್ದು, ಅಲಂಕಾರ ಸೇವೆ ನಡೆಯಿತು. ಸಂಜೆ ಆದಿಶಕ್ತಿ ಮಹಿಳಾ ಮಂಡಳಿ ವತಿಯಿಂದ ನಡೆಯಲಿದೆ.
ವಿಜಯನಗರದ ಮಾರುತಿ ಬಂಡೆ ದೇವಾಲಯ, ದಾರಿ ಆಂಜನೇಯ ಸ್ವಾಮಿ ದೇವಾಲಯ, ಸಜ್ಜನ್ ರಾವ್ ವೃತ್ತದ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಸಹಕಾರ ನಗರದ ಕೋದಂಡರಾಮಸ್ವಾಮಿ ದೇವಾಲಯ, ವೈಯಾಲಿಕಾವಲ್ನ ಶ್ರೀರಾಮದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಪೂಜೆಗಳು ನೆರವೇರಿದವು.
ಇನ್ನು ರಾಮ- ಲಕ್ಷ್ಮಣ, ಹನುಮನ ವೇಷಧಾರಿಗಳು ನಗರದಲ್ಲಿ ಸಂಚರಿಸಿ ಗಮನ ಸೆಳೆದರು.
ಪ್ರಮುಖ ಬಡಾವಣೆಗಳಲ್ಲಿ ಸಂಘ ಸಂಸ್ಥೆಯವರು, ಸ್ವಯಂ ಸೇವಕರು ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುತ್ತಿರುವ ದೃಶ್ಯ ಕಂಡು ಬಂತು.