ಜೆಟ್ ಏರ್ ವೇಸ್ ಆರ್ಥಿಕ ಸಂಕಷ್ಟ: ಪಿಎಂಒ ತುರ್ತು ಸಭೆ

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಏರ್‌ಲೈನ್‌ ಜೆಟ್‌ ಏರ್‌ವೇಸ್‌ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿಯವರ ಕಚೇರಿ (ಪಿಎಂಒ) ತುರ್ತು ಸಭೆ ಕರೆದು ಚರ್ಚೆ ನಡೆಸಿದೆ.

ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಇಲಾಖೆಯ ಕಾರ್ಯದರ್ಶಿಯ ಜತೆಗೆ ಜೆಟ್‌ ಏರ್‌ವೇಸ್‌ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ನಂತರ ಪಿಎಂಒ ತುರ್ತು ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಜೆಟ್‌ ಏರ್‌ವೇಸ್‌ ಸೋಮವಾರದ ತನಕ ತನ್ನ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಕಳೆದ 25 ವರ್ಷಗಳ ತನ್ನ ಇತಿಹಾಸದಲ್ಲಿಯೇ ಗಂಭೀರ ಬಿಕ್ಕಟ್ಟನ್ನು ಜೆಟ್‌ ಏರ್‌ವೇಸ್‌ ಎದುರಿಸುತ್ತಿದೆ.

ಪ್ರಸ್ತುತ ಜೆಟ್‌ ಏರ್‌ವೇಸ್‌ನಲ್ಲಿ ಶೇ.24ರಷ್ಟು ಷೇರುಗಳನ್ನು ಹೊಂದಿರುವ, ಅಬುಧಾಬಿ ಮೂಲದ ಎತಿಹಾಡ್‌ ಏರ್‌ವೇಸ್‌ ಜೆಟ್‌ ಏರ್‌ವೇಸ್‌ನ ಬಹುಪಾಲು ಷೇರುಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಎತಿಹಾಡ್‌ ಷೇರು ಪಾಲನ್ನು ಹೆಚ್ಚಿಸಲು ನಿರಾಕರಿಸಿತ್ತು. ಆದರೆ ಇದೀಗ ಬಿಡ್‌ದಾರರನ್ನು ಎತಿಹಾಡ್‌ ಸೇರಿಕೊಳ್ಳುವ ನಿರೀಕ್ಷೆ ಇದೆ.

ಜೆಟ್‌ ಏರ್‌ವೇಸ್‌ ಜತೆ ಸದ್ಯಕ್ಕೆ 16 ವಿಮಾನಗಳು ಲಭ್ಯವಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಪ್ಯಾರಿಸ್‌ಗೆ, ದಿಲ್ಲಿ-ಅಮ್‌ಸ್ಟರ್‌ಡ್ಯಾಮ್‌, ಮುಂಬಯಿ-ಲಂಡನ್‌ ನಡುವೆ ಜೆಟ್‌ ಏರ್‌ವೇಸ್‌ ವಿಮಾನ ಹಾರಾಟ ರದ್ದಾಗಿವೆ. ದೇಶಿ ಮಾರ್ಗಗಳ ಪೈಕಿ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಲಯದಲ್ಲಿ ತನ್ನ ವಿಮಾನ ಹಾರಾಟವನ್ನು ಜೆಟ್‌ ಏರ್‌ವೇಸ್‌ ರದ್ದುಪಡಿಸಿದೆ. ಕೋಲ್ಕೊತಾ, ಪಟನಾ, ಗುವಾಹಟಿ ವಿಮಾನ ನಿಲ್ದಾಣಗಳಿಂದ ಜೆಟ್‌ ವಿಮಾನಗಳ ಸಂಚಾರ ಸ್ಥಗಿತವಾಗಿದೆ.

PMO holds meeting on Jet Airways crisis

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ