ಬೆಂಗಳೂರು, ಏ.13-ಅನಿವಾಸಿ ಭಾರತೀಯರು ತಮ್ಮ ಬಿಡುವಿನ ಸಮಯದಲ್ಲಿ ಮೋದಿ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ ಎಂದು ಎನ್.ಆರ್.ಐ ಫ್ರೆಂಡ್ಸ್ ಆಫ್ ಮೋದಿ ಸಂಘಟನೆಯ ಚಂದ್ರಕಾಂತ ಯತ್ನಟ್ಟಿ ತಿಳಿಸಿದರು.
ಪ್ರಸ್ತುತ ಅಮೆರಿಕಾದಲ್ಲಿರುವ ಎನ್.ಆರ್.ಐ ಪ್ರಚಾರ ಅಭಿಯಾನ ತಂಡದ ಚಂದ್ರಕಾಂತ ಯತ್ನಟ್ಟಿ ಮತ್ತು ಸದಸ್ಯರು ಭಾರತೀಯ ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯ ಮಾಡುತ್ತಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯತ್ನಟ್ಟಿ, ತಮ್ಮ ಬಿಡುವಿನ ಸಮಯದಲ್ಲಿ ಪ್ರತಿನಿತ್ಯ ತಾಯ್ನಾಡಿಗೆ ಕರೆ, ಟ್ವೀಟ್ ಮತ್ತು ಫೇಸ್ಬುಕ್ಗಳಲ್ಲಿ ಸ್ಟೇಟಸ್ ಅಪ್ಲೋಡ್ ಮಾಡುವ ಮೂಲಕ ಮತದಾರರ ಸಂಪರ್ಕಕ್ಕೆ ಮುಂದಾಗಿ ಆ ಮೂಲಕ ಸ್ವಪ್ರೇರಣೆಯಿಂದ ಬಿಜೆಪಿ ಪರ ಪ್ರಚಾರ ಕೈಗೊಂಡಿರುವುದಾಗಿ ತಿಳಿಸಿದರು.
ಅನಿವಾಸಿ ಭಾರತೀಯರು ಸಾವಿರಾರು ಮೈಲು ದೂರವಿದ್ದರೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶದಿಂದ ತಾವಿರುವ ಸ್ಥಳದಿಂದಲೇ ಬಿಜೆಪಿಗೆ ಮತ ಚಲಾಯಿಸುವಂತೆ ಮನವೊಲಿಕೆ ಮಾಡುತ್ತಿದ್ದು ಈ ಬಾರಿ 5 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಅನಿವಾಸಿ ಭಾರತೀಯರು ಮತದಾನಕ್ಕೆ ತಾಯ್ನಾಡಿಗೆ ಆಗಮಿಸಲಿದ್ದಾರೆ ಎಂದರು.
ಚಂದ್ರಕಾಂತ ಯತ್ನಟ್ಟಿ ತಂಡದಲ್ಲಿರುವ ಮೂಲತಃ ಮಂಡ್ಯದವರಾದ ಅಮೆರಿಕಾದಲ್ಲಿರುವ ಸೌರವ್, ಆಸ್ಟ್ರೇಲಿಯಾದಲ್ಲಿರುವ ಸುಜಾತಾ ಪಾಟೀಲ್, ಲಂಡನ್ನಲ್ಲಿರುವ ಡಾ.ಭದ್ರಿ ಮತ್ತಿತರರು ಈಗ ಬೆಂಗಳೂರಿಗೆ ಆಗಮಿಸಿದ್ದಾರೆ.ಹೀಗೆ ಇನ್ನೂ ಹಲವಾರು ಅನಿವಾಸಿ ಭಾರತೀಯ ತಂಡಗಳು ಉತ್ತರಪ್ರದೇಶ, ದೆಹಲಿ, ಬಿಹಾರ್, ಗುಜರಾತ್ಗೂ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.