ಬೆಂಗಳೂರು, ಏ.13-ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕೆಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಚುನಾವಣೆ ಮತ್ತು ಮಾಧ್ಯಮ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ಇಲ್ಲದೆ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ.
ಹೀಗಾಗಿ ಮಾಧ್ಯಮವೂ ಕೂಡ ಚುನಾವಣಾ ಪ್ರಕ್ರಿಯೆಗೆ ಅಗತ್ಯವಾಗಿದೆ. ಒಬ್ಬೊಬ್ಬ ಅಭ್ಯರ್ಥಿಗಳಿಗೂ ಒಂದೊಂದು ಧೋರಣೆ ಇರುವಂತಹ ಸಂದರ್ಭದಲ್ಲಿ ಜನರಿಗೆ ಚುನಾವಣೆಯ ಬಗ್ಗೆ, ಸಮಾಜದ ಬಗ್ಗೆ, ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಸಾಮಾಜಿಕ ಜಾಲತಾಣಗಳು ಮತದಾರರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತಿವೆ.
ಮತದಾರರನ್ನು ಶಿಕ್ಷಿತರನ್ನಾಗಿ ಮಾಡುವುದು ಹಾಗೂ ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡುವುದು ಮಾಧ್ಯಮಗಳ ಜವಾಬ್ದಾರಿ. ಪಾರದರ್ಶಕವಾದ ಜನಸಾಮಾನ್ಯರ ಚರ್ಚೆಗೆ ವೇದಿಕೆಯಾಗುವ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದರು.
ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.