ಬೆಂಗಳೂರು, ಏ.13- ಈ ಬಾರಿಯ ಲೋಕಸಭೆ ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ.
ಪ್ರತಿಷ್ಠಿತ ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ತಮ್ಮ ಪುತ್ರರನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.ಒಂದು ವೇಳೆ ಫಲಿತಾಂಶವೇನಾದರೂ ಸ್ವಲ್ಪ ವ್ಯತ್ಯಾಸವಾದರೆ ಇಬ್ಬರ ರಾಜಕೀಯ ಭವಿಷ್ಯಕ್ಕೂ ಕೊಡಲಿಯೇಟು ಬೀಳುವುದು ಗ್ಯಾರಂಟಿ.
ಹೀಗಾಗಿಯೇ ಉಭಯ ನಾಯಕರು ಇಂದಿನಿಂದ ತಮ್ಮ ತಮ್ಮ ಸ್ವ ಕ್ಷೇತ್ರಗಳಲ್ಲೇ ಠಿಕಾಣಿ ಹೂಡಿ ಪುತ್ರರ ಪರ ಮತಯಾಚನೆ ಮಾಡಲಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಎರಡು ದಿನಗಳ ಕಾಲ ಪ್ರಚಾರ ನಡೆಸಿದರೆ.ಶಿವಮೊಗ್ಗದಲ್ಲಿ ಯಡಿಯೂರಪ್ಪ ಮೂರು ದಿನ ಜಿಲ್ಲೆಯಾದ್ಯಂತ ತಮ್ಮ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ.
ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಫಲಿತಾಂಶ ವ್ಯತ್ಯಾಸವಾದರೆ ಅದು ನೇರವಾಗಿ ತಮ್ಮ ನಾಯಕತ್ವದ ಮೇಲೆ ಪರಿಣಾಮ ಬೀರಲಿದೆ ಎಂಬುದು ಈ ಇಬ್ಬರು ನಾಯಕರಿಗೂ ತಿಳಿದಿದೆ.
ತಮ್ಮ ಪುತ್ರರನ್ನೇ ಗೆಲ್ಲಿಸಲು ಸಾಧ್ಯವಾಗದವರು ಹೇಗೆ ಅತ್ಯುನ್ನತ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂಬ ನೈತಿಕ ಪ್ರಶ್ನೆಯನ್ನು ತಮ್ಮ ಪಕ್ಷದವರೇ ಮುಂದಿಡಲಿದ್ದಾರೆ ಎಂಬುದನ್ನು ಗ್ರಹಿಸಿದ್ದಾರೆ.ಹೀಗಾಗಿ ತಮ್ಮ ಪ್ರತಿಷ್ಠೆಗಳನ್ನು ಬದಿಗೊತ್ತಿ ತಮ್ಮ ಪುತ್ರರನ್ನು ಗೆಲ್ಲಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡರೆ, ಕುಮಾರಸ್ವಾಮಿ ನಾಯಕತ್ವದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ನಾಯಕರೇ ತಿರುಗಿ ಬೀಳುತ್ತಾರೆ.
ಮಗನನ್ನೇ ಗೆಲ್ಲಿಸಲು ಸಾಧ್ಯವಾಗದಿದ್ದಾಗ ಯಾವ ನೈತಿಕತೆಯ ಮೇಲೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂಬ ಕಾರಣಕ್ಕೆ ಅಸಮಾಧಾನಗೊಂಡ ಕೆಲ ಶಾಸಕರು ಬಂಡಾಯ ಸಾರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದೇ ವೇಳೆ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಹೀಗಾಗಿಯೇ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಘೋಷಿಸಿದೆ.
ಅಲ್ಲದೆ, ಬಿಜೆಪಿಯ ಎಲ್ಲಾ ಕಾರ್ಯಕರ್ತರು ಕಡ್ಡಾಯವಾಗಿ ಸುಮಲತಾ ಅವರಿಗೆ ಮತ ಹಾಕಬೇಕೆಂದು ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಮಂಡ್ಯದಲ್ಲಿ ಸುಮಲತಾ ಅವರನ್ನು ಬೆಂಬಲಿಸುವಂತೆ ಮತದಾರರಿಗೆ ಕರೆಕೊಟ್ಟಿದ್ದರು.
ಬಿಜೆಪಿಯ ಒಂದೇ ಅಜೆಂಡಾ ಎಂದರೆ ಮಂಡ್ಯದಲ್ಲಿ ನಿಖಿಲ್ಕುಮಾರಸ್ವಾಮಿ ಸೋತು ಸುಮಲತಾ ಅವರು ಗೆದ್ದರೆ ಯಾವುದೇ ಕಾರಣಕ್ಕೂ ಸರ್ಕಾರ ಉಳಿಯುವುದಿಲ್ಲ. ಒಂದು ವೇಳೆ ಸರ್ಕಾರ ಉಳಿದರೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಮಾರಸ್ವಾಮಿ ಮುಂದುವರೆಯುವುದು ಸಾಧ್ಯವೇ ಇಲ್ಲ.
ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸೋತ ಸಂದರ್ಭದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿರುವ ನಿದರ್ಶನಗಳಿವೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಂದು ಜನತಾದಳ ಕಾಂಗ್ರೆಸ್ ಎದುರು ಹೀನಾಯ ಸೋಲು ಕಂಡಾಗ ನೈತಿಕ ಹೊಣೆ ಹೊತ್ತ ಹೆಗಡೆಯವರು ಸರ್ಕಾರವನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯಲು ಮುಂದಾಗಿದ್ದರು. ಆದರೆ, ರಾಜ್ಯದಲ್ಲಿ ಪ್ರಸ್ತುತ ಸಮ್ಮಿಶ್ರ ಸರ್ಕಾರ ಇರುವುದರಿಂದ ವಿಧಾನಸಭೆ ವಿಸರ್ಜನೆಯಂತಹ ದುಸ್ಸಾಹಸಕ್ಕೆ ಕುಮಾರಸ್ವಾಮಿ ಕೈ ಹಾಕುವ ಸಾಧ್ಯತೆಗಳು ತೀರಾ ಕಡಿಮೆ.
ನಾಯಕತ್ವ ಬದಲಾಗಬೇಕೆಂಬ ಕೂಗು ಹೆಚ್ಚಾದರೆ, ಇಲ್ಲವೇ ಭಿನ್ನಮತೀಯ ಚುಟುವಟಿಕೆಗಳು ಬಿರುಸುಗೊಂಡರೆ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಲೇಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ನಾವು ಪರಿಸ್ಥಿತಿಯ ಲಾಭ ಪಡೆಯಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಶಿವಮೊಗ್ಗದಲ್ಲೂ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಅಲ್ಲಿ ಯಡಿಯೂರಪ್ಪನವರ ಪುತ್ರ ರಾಘವೇಂದ್ರರನ್ನು ಸೋಲಿಸಿದರೆ ಯಡಿಯೂರಪ್ಪನವರಿಗೆ ಮುಖಭಂಗವಾಗುತ್ತದೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಶಾಶ್ವತ ಕಡಿವಾಣ ಬೀಳಲಿದೆ ಎಂಬುದು ದೋಸ್ತಿ ನಾಯಕರ ಲೆಕ್ಕಾಚಾರ.ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಡಿ.ಕೆ.ಶಿವಕುಮಾರ್ಗೆ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ.
ಇದು ತಮ್ಮ ರಾಜಕೀಯ ಜೀವನದ ಕೊನೆಯ ಆಟ ಎಂದು ಅಖಾಡಕ್ಕಿಳಿಯಲು ಮುಂದಾಗಿರುವ ಯಡಿಯೂರಪ್ಪ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರ ಒಂದಂಕಿಗೆ ಇಳಿದರೆ ಯಾವುದೇ ಕಾರಣಕ್ಕೂ ಆಡಳಿತದಲ್ಲಿ ಮುಂದುವರೆಯಲು ಬಿಡುವುದಿಲ್ಲ ಎಂಬುದು ದೋಸ್ತಿಗಳಿಗೂ ತಿಳಿಸಿದೆ.
ಈಗಾಗಲೇ ಕಾಂಗ್ರೆಸ್ನ ಹಲವು ಅತೃಪ್ತ ಶಾಸಕರನ್ನು ಸೆಳೆದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದ್ದರು. ದೇವದುರ್ಗದಲ್ಲಿ ಆಡಿಯೋ ಬಹಿರಂಗಗೊಳ್ಳದಿದ್ದರೆ ಈಹೊತ್ತಿಗಾಗಲೇ ಸಮ್ಮಿಶ್ರ ಸರ್ಕಾರದ ಹಣೆ ಬರಹ ಏನು ಬೇಕಾದರೂ ಆಗುತ್ತಿತ್ತು.
ಕಾಂಗ್ರೆಸ್ನಲ್ಲಿ ಕೊತಕೊತ ಕುದಿಯುತ್ತಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ, ಜೈಲು ಪಾಲಾಗಿರುವ ಜೆ.ಎನ್.ಗಣೇಶ್ ಸೇರಿದಂತೆ ಅನೇಕರು ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ದೋಸ್ತಿ ಅಭ್ಯರ್ಥಿಗಳು ಒಂದಂಕಿಗೆ ಇಳಿದರೆ ಸರ್ಕಾರಕ್ಕೆ ಖೆಡ್ಡಾ ತೋಡಿಸಲು ಬಿಜೆಪಿ ಸಜ್ಜಾಗುತ್ತಿದೆ.
ಅಂತಿಮವಾಗಿ ಮೇ 23ರ ಫಲಿತಾಂಶ ಯಾರಿಗೆ ಸಿಹಿ, ಯಾರಿಗೆ ಕಹಿ ಎಂಬುದನ್ನು ಮತದಾರ ತೀರ್ಮಾನಿಸಲಿದ್ದಾನೆ. ಅಲ್ಲಿಯ ತನಕ ಕಾಯಲೇಬೇಕು.