ಬೆಂಗಳೂರು, ಮಾ.13-ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕುರಿತಂತೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ, ಜೆಡಿಎಸ್ನ ನಾಯಕರಾದ ಬಸವರಾಜ್ ಹೊರಟ್ಟಿ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಹಿಂದೆ ಸಮುದಾಯದ ವಿವಿಧ ಮಠಾಧೀಶರು, ಮುಖಂಡರು ಹೋರಾಟ ಮಾಡಿದ ಸಂದರ್ಭದಲ್ಲಿ ಸಂಘಟನೆಗಳ ಮನವಿ ಆಧರಿಸಿ ಸಿದ್ದರಾಮಯ್ಯ ಅವರ ಸರ್ಕಾರ ಸಂಪುಟದಲ್ಲಿ ನಿರ್ಣಯ ಕೈಗೊಂಡು ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿಯೂ ಆಗಿದೆ.ಅದೆಲ್ಲ ಈಗ ಮುಗಿದ ಅಧ್ಯಾಯ.ಡಿ.ಕೆ.ಶಿವಕುಮಾರ್ ಪದೇ ಪದೇ ಈ ವಿಷಯ ಪ್ರಸ್ತಾಪಿಸಿ ಗೊಂದಲ ಉಂಟು ಮಾಡುತ್ತಿರುವುದೇಕೆ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.
ಈ ರೀತಿಯ ಕ್ಷಮೆಯಾಚನೆಯಿಂದ ಉಂಟಾಗುವ ಗೊಂದಲಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಯಾವ ನಾಯಕರು ಆಯ್ಕೆಯಾಗಬಾರದು ಎಂಬುದು ಡಿ.ಕೆ.ಶಿವಕುಮಾರ್ ಅವರ ಉದ್ದೇಶವಿದ್ದಂತಿದೆ.ಅವರ ಮಾತುಗಳನ್ನು ಕೇಳಿಕೊಂಡು ಸುಮ್ಮನಿರಬೇಡಿ ಎಂದು ನಮಗೆ ಕಾಂಗ್ರೆಸ್ನ ಬಹಳಷ್ಟು ನಾಯಕರು ದೂರವಾಣಿ ಮೂಲಕ ಸಲಹೆ ನೀಡುತ್ತಿದ್ದಾರೆ.ಡಿ.ಕೆ.ಶಿವಕುಮಾರ್ ಈಗಲಾದರೂ ಹಳೆಯದನ್ನೆಲ್ಲ ಕೆದಕದೆ ತಟಸ್ಥವಾಗಿರುವುದು ಒಳ್ಳೆಯದು.ಅಂತಹ ಸಂದರ್ಭ ಬಂದರೆ, ಸಮುದಾಯದ ನಾಯಕರು, ಮುಖಂಡರಿದ್ದಾರೆ.ಅವರು ಆ ವಿಚಾರವನ್ನು ನೋಡಿಕೊಳ್ಳುತ್ತಾರೆ ಎಂದು ಹೊರಟ್ಟಿ ತಿರುಗೇಟು ನೀಡಿದ್ದಾರೆ.
ನಿನ್ನೆ ಡಿ.ಕೆ.ಶಿವಕುಮಾರ್ ಕ್ಷಮೆಯಾಚನೆ ನಂತರ ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಬೇಕೆಂದು ತಿಳಿಸಿದರು.
ಇಂದು ಬಸವರಾಜ್ ಹೊರಟ್ಟಿ ಕೂಡ ಅದೇ ರೀತಿ ಅಭಿಪ್ರಾಯ ಹೊರಹಾಕಿದ್ದಾರೆ.