ಚುನಾವಣಾ ಫಲಿತಾಂಶದ ನಂತರ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂಭವ

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯಾಗುವ ಸಂಭವವಿದ್ದು, ತೆರವಾಗಲಿರುವ ಸ್ಥಾನಕ್ಕೆ ಆಕಾಂಕ್ಷಿಗಳು ಈಗಾಗಲೇ ತೆರೆ ಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.

ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಜೂನ್ ತಿಂಗಳಿನಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಕರ್ನಾಟಕದ ಬಿಜೆಪಿ ಘಟಕಕ್ಕೆ ನೂತನ ಸಾರಥಿಯನ್ನು ನೇಮಕ ಮಾಡಲು ಮುಂದಾಗಿದ್ದಾರೆ.

ಹಾಲಿ ಅಧ್ಯಕ್ಷರಾಗಿರುವ ಯಡಿಯೂರಪ್ಪನವರನ್ನು ಬದಲಾಯಿಸಿ ಸೂಕ್ತ ಅಭ್ಯರ್ಥಿಯೊಬ್ಬರನ್ನು ಈ ಸ್ಥಾನದಲ್ಲಿ ಕೂರಿಸಲು ಈಗಾಗಲೇ ಚಿಂತನ-ಮಂಥನ ಆರಂಭವಾಗಿದೆ.

ಎಪ್ಪತ್ತೈದು ವರ್ಷ ದಾಟಿದವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನಮಾನ ನೀಡದಿರಲು ಬಿಜೆಪಿ ತೀರ್ಮಾನಿಸಿದೆ.ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಂಸ್ಥಾಪಕರಾಗಿದ್ದ ಲಾಲ್‍ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜ್ಯೋಷಿ, ಲೋಕಸಭೆ ಸ್ಪೀಕರ್ ಸುಮಿತ್ರ ಮಹಾಜನ್ ಸೇರಿದಂತೆ ಅನೇಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ.

ಎಪ್ಪತ್ತೈದರ ಮಾನದಂಡ ಎಲ್.ಕೆ.ಅಡ್ವಾಣಿ ಅಂಥವರಿಗೆ ಅನ್ವಯಿಸುವಂತಾದರೆ ಯಡಿಯೂರಪ್ಪನವರಿಗೂ ಅದೇ ನಿಯಮ ಪಾಲನೆಯಾಗಬೇಕು ಎಂಬುದು ಬಹತೆಕರ ಒತ್ತಾಯ.ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಬದಲಾಯಿಸಬೇಕೆಂಬ ಬೇಡಿಕೆ ರಾಜ್ಯ ಘಟಕದಿಂದಲೂ ಹೋಗಿದೆ.

ಬಿಜೆಪಿಯ ಸಂವಿಧಾನದ ಪ್ರಕಾರ ರಾಷ್ಟ್ರೀಯ ಹಾಗೂ ರಾಜ್ಯ ಘಟಕಗಳ ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳ ಅವಧಿಗೆ ಸೀಮಿತಗೊಳಿಸಲಾಗಿದೆ.ನಂತರ ಪುನಃ ಅದೇ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಪಕ್ಷದ ಬೈಲಾವನ್ನು ತಿದ್ದುಪಡಿ ಮಾಡಬೇಕು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಎರಡನೇ ಅವಧಿಗೆ ಮುಂದುವರೆಸಲು ಬೈಲಾ ತಿದ್ದುಪಡಿ ಮಾಡಲಾಯಿತು. ಈಗ ಯಡಿಯೂರಪ್ಪನವರನ್ನು ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಸಬೇಕಾದರೆ ಬೈಲಾ ತಿದ್ದುಪಡಿಯಾಗಲೇಬೇಕು.

ನನಗೆ ಯಾವುದೇ ಸ್ಥಾನಮಾನದ ಆಸೆಯಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಮುಂದುವರೆಯಲು ಸಿದ್ದನಿದ್ದೇನೆ. 75ರ ವಯಸ್ಸಿನ ಮಾನದಂಡ ಪಕ್ಷದ ಅಲಿಖಿತ ನಿಯಮವೇನಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದರಿಂದ ಪಕ್ಷದ ವರಿಷ್ಠರು ಅವರನ್ನು ಮುಂದುವರೆಸುತ್ತಾರೋ ಇಲ್ಲವೇ ಬೇರೊಬ್ಬರಿಗೆ ಈ ಸಾರಥ್ಯವನ್ನು ನೀಡಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಒಂದು ವೇಳೆ ಅಧ್ಯಕ್ಷ ಸ್ಥಾನದಲ್ಲಿ ನಾನೇ ಮುಂದುವರೆಯುತ್ತೇನೆಂದು ಯಡಿಯೂರಪ್ಪ ಪಟ್ಟು ಹಿಡಿದರೆ ವರಿಷ್ಠರು ಹೆಚ್ಚು ತಕರಾರು ತೆಗೆಯುವ ಸಾಧ್ಯತೆಗಳಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯಲಿವೆ ಎಂಬ ನಂಬಿಕೆಯನ್ನು ಬಿಜೆಪಿ ಇಟ್ಟುಕೊಂಡಿದೆ.

ಈ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸೋತರೆ ಅದರ ನೇರ ಹೊಣೆಗಾರಿಕೆಯನ್ನು ಎಚ್.ಡಿ.ಕುಮಾರಸ್ವಾಮಿ ಹೊರಬೇಕಾಗುತ್ತದೆ.ಫಲಿತಾಂಶದ ಹಿನ್ನಡೆಯಿಂದಾಗಿ ದೋಸ್ತಿ ಪಕ್ಷಗಳಲ್ಲಿ ಶಾಸಕರು ಭಿನ್ನಮತ ಸಾರಲಿದ್ದಾರೆ.ಇದರಿಂದ ಸರ್ಕಾರವನ್ನು ಅಸ್ಥಿರಗೊಳಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

ಒಂದು ವೇಳೆ ಅದೃಷ್ಟ ಖುಲಾಯಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಸಹಜವಾಗಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ.

ರೇಸ್‍ನಲ್ಲಿ ಯಾರ್ಯಾರು:
ಬಿಎಸ್‍ವೈ ಅವರಿಂದ ತೆರವಾಗಲಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಅನೇಕರು ರೇಸ್‍ನಲ್ಲಿದ್ದಾರೆ.

ಇವರೆಲ್ಲರೂ ಕೂಡ ಆರ್‍ಎಸ್‍ಎಸ್ ಹಿನ್ನೆಲೆಯುಳ್ಳವರಾಗಿದ್ದು, ಸಂಘ ಪರಿವಾರ ಸೂಚಿಸುವ ಅಭ್ಯರ್ಥಿಗಳೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ.ಮೂಲಗಳ ಪ್ರಕಾರ ಯಡಿಯೂರಪ್ಪ ತಮ್ಮ ಆಪ್ತ ಉಮೇಶ್ ಕತ್ತಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಒಲವು ತೋರಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡದೇ ಇರುವುದರಿಂದ ಅಸಮಾಧಾನಗೊಂಡಿದ್ದಾರೆ.ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಇವರು ತಮ್ಮದೇ ಆದ ಪ್ರಭಾವವನ್ನೂ ಹೊಂದಿದ್ದಾರೆ.

ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ ಕತ್ತಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಆ ಭಾಗದಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಬಹುದೆಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.

ಇನ್ನು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಕೂಡ ಆರ್‍ಎಸ್‍ಎಸ್‍ನ ಪಕ್ಕಾ ಬೆಂಬಲಿಗ. ಮೂರು ಬಾರಿ ಶಾಸಕರಾಗಿ, ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿಎಸ್‍ವೈ ಆಪ್ತ ಬಣದಲ್ಲಿ ಲಿಂಬಾವಳಿ ಗುರುತಿಸಿಕೊಂಡಿರುವುದರಿಂದ ಸಹಜವಾಗಿ ಅವರೂ ಕೂಡ ಆಕಾಂಕ್ಷಿಯಾಗಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗುತ್ತಿರುವ ಬಿಜೆಪಿ ಮುಖಂಡ ಆರ್.ಅಶೋಕ್ ಈಗಾಗಲೇ ತಮ್ಮ ಮನದ ಇಂಗಿತವನ್ನು ಹೊರ ಹಾಕಿದ್ದಾರೆ.

ಅಧ್ಯಕ್ಷ ಸ್ಥಾನ ನೀಡಿದರೆ ನಾನು ನಿಭಾಯಿಸಲು ಸಿದ್ದ ಎಂಬ ಸಂದೇಶವನ್ನು ರವಾನಿಸಿದ್ದಾರೆ.ಉಳಿದಂತೆ ಚಿಕ್ಕಮಗಳೂರಿನ ಸಿ.ಟಿ.ರವಿ ಕೂಡ ಸಂಘ ಪರಿವಾರದ ಅಚ್ಚುಮೆಚ್ಚಿನ ಶಿಷ್ಯ. ಈಗಾಗಲೇ ಹೊರ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಗಳಾಗಿ ಕೆಲಸ ಮಾಡಿದ ಅನುಭವ ಇವರಿಗೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ