ಬೆಂಗಳೂರು, ಏ.13- ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡುವ ಸುಮಾರು 3 ಲಕ್ಷ ಕೋಟಿ ನಕಲಿ ನೋಟುಗಳು ದೇಶದೊಳಗೆ ಬಂದಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಕಲಿ ನೋಟುಗಳ ಹಗರಣವನ್ನು ವಿಶೇಷ ತನಿಖೆ ಮಾಡುವಂತೆ ಸುಪ್ರೀಂಕೋರ್ಟ್ಗೆ ತಾವು ಮನವಿ ಮಾಡಿದ್ದು, ಹಗರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಕೋರಿದ್ದೇನೆ ಎಂದರು.
ವಿದೇಶದಿಂದ ವಿಶೇಷ ವಿಮಾನ ನಿಲ್ದಾಣದ ಮೂಲಕ 3 ಲಕ್ಷ ಕೋಟಿ ಭಾರತಕ್ಕೆ ತಲುಪಿದೆ.ಇದನ್ನು ಖಾಸಗಿ ಕಂಪನಿಗಳು ಹಾಗೂ ಬ್ಯಾಂಕ್ಗಳ ಮೂಲಕ ಚಲಾವಣೆಗೆ ತರಲಾಗಿದೆ. ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಿಕೊಳ್ಳಲು ಈ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಈ ಹಗರಣದ ಸಮಗ್ರ ವರದಿಯನ್ನು ಖಾಸಗಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಈ ಹಗರಣದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಉನ್ನತಾಧಿಕಾರಿಗಳು ಹಾಗೂ ಮತ್ತಿತರ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಭಾಗವಹಿಸಿದ್ದಾರೆ ಎಂದು ವರದಿಯಲ್ಲಿ ಆರೋಪ ಮಾಡಲಾಗಿದೆ.
ಈ ಹಗರಣದ ಬಗ್ಗೆ ಗಂಭೀರ ತನಿಖೆ ನಡೆಯಬೇಕಿದೆ.ರಾಷ್ಟ್ರಪತಿಯವರಿಗೂ ಈ ಬಗ್ಗೆ ದೂರು ನೀಡಿದ್ದು, ಜೊತೆಗೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ಇತರ ನ್ಯಾಯಾಧೀಶರುಗಳಿಗೆ ಪತ್ರ ಬರೆದಿದ್ದೇನೆ. ಈ ಹಗರಣವನ್ನು ಸುಪ್ರೀಂಕೋರ್ಟ್ನ ನೇರ ಉಸ್ತುವಾರಿಕೆಯಲ್ಲಿಯೇ ತನಿಖೆ ಮಾಡಿಸಬೇಕು. ಈ ಹಿಂದೆ ಮಧ್ಯಪ್ರದೇಶದಲ್ಲಿ ವ್ಯಾಪಮ್ ಹಗರಣ ನಡೆದಾಗ ಅದರ ಸಾಕ್ಷಿಗಳಾಗಿದ್ದ 44 ಮಂದಿಯಲ್ಲಿ ಬಹಳಷ್ಟು ಮಂದಿ ಕೊಲೆಯಾದರು, ಆತ್ಮಹತ್ಯೆ ಮಾಡಿಕೊಂಡರು, ಅಸಹಜ ಸಾವಿಗೀಡಾದರು.ಆ ರೀತಿ ಮತ್ತೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ.ನಕಲಿ ನೋಟು ಪ್ರಕರಣವನ್ನು ಸುಪ್ರೀಂಕೋರ್ಟ್ ನೇರ ಉಸ್ತುವಾರಿಕೆಯಲ್ಲಿಯೇ ತನಿಖೆ ನಡೆಯಬೇಕು.ಜೊತೆಗೆ ವ್ಯಾಪಮ್ ಹಗರಣದ ಸಾಕ್ಷಿಗಳಿಗೂ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮೂರು ಹಂತಗಳ ತಲಾ ಒಂದೊಂದು ಲಕ್ಷ ಕೋಟಿ ನಕಲಿ ನೋಟು ಭಾರತಕ್ಕೆ ಬಂದಿಳಿದಿದೆ ಎಂದು ರಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ಹೊರಹಾಕಿದ್ದಾರೆ.
ವಿವಿಧ ಇಲಾಖೆಯ ಸುಮಾರು 26 ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಇದು ದೇಶದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿಯಲು, ನಿರುದ್ಯೋಗ ಹೆಚ್ಚಾಗಲು ನರೇಂದ್ರ ಮೋದಿಯವರು ತೆಗೆದುಕೊಂಡ ನೋಟು ಅಮಾನೀಕರಣವೇ ಕಾರಣ. ವಿಶ್ವದಲ್ಲಿ ಆರ್ಥಿಕ ಕುಸಿತ ಕಂಡಾಗ ಭಾರತ ಸುಸ್ಥಿತಿಯಲ್ಲಿತ್ತು. ಅದಕ್ಕೆ ವಿಶ್ವದ ಆರ್ಥಿಕ ತಜ್ಞರಾಗಿದ್ದ ಮನ್ಮೋಹನ್ಸಿಂಗ್ ಅವರ ನಿರ್ಧಾರಗಳು ಕಾರಣವಾಗಿತ್ತು.ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅರ್ಥವ್ಯವಸ್ಥೆ ಹದಗೆಟ್ಟಿದೆ.ನಿರುದ್ಯೋಗದ ಪ್ರಮಾಣ ಸ್ವಾತಂತ್ರ್ಯ ಭಾರತದ ನಂತರ ಮೊದಲ ಬಾರಿಗೆ ಅತಿ ಹೆಚ್ಚಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮೋದಿಯವರು ಚುನಾವಣೆಗೆ ಮೊದಲು ನೀಡಿದ್ದ ಭರವಸೆಗಳ ಬಗ್ಗೆ ನಾನು ಪ್ರಸ್ತಾಪಿಸುವುದಿಲ್ಲ. ಆದರೆ ನಕಲಿ ನೋಟುಗಳ ಬಗ್ಗೆ ಗಂಭೀರ ತನಿಖೆ ನಡೆಯಬೇಕು ಎಂದು ಹೇಳಿದರು.