ಹಾಸನ, ಏ.12-ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ನಾಟಕ ಕಂಪೆನಿ ರಾಜ್ಯದಲ್ಲಿ ಕ್ಲೋಸ್ ಆಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಪರವಾಗಿ ಹನುಮಂತಪುರದಲ್ಲಿ ಪ್ರಚಾರ ಕೈಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಂಡ್ ಡ್ರಾಮಾ ಕಂಪೆನಿ ಕರ್ನಾಟಕದಲ್ಲಿ ಈ ಬಾರಿ ಕ್ಲೋಸ್ ಆಗಲಿದೆ. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಲಘುವಾಗಿ ಮಾತನಾಡುತ್ತಿದ್ದಾರೆ.ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಅವರಿಗೂ ಒಂದು ಒಳ್ಳೇ ನಿಂಬೆಹಣ್ಣು ಕೊಡೋಣ ಎಂದು ವ್ಯಂಗ್ಯವಾಡಿದರು.
ರಾಮಮಂದಿರದ ಹೆಸರಿನಲ್ಲಿ ಇಟ್ಟಿಗೆ ಸಂಗ್ರಹಿಸಿ ಯಾರ್ಯಾರು ಮನೆ ಕಟ್ಟಿಕೊಂಡರು ಎಂದು ಪ್ರಶ್ನಿಸಿದರು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಮೈತ್ರಿ ಅಭ್ಯರ್ಥಿ ಪರವಾದ ಒಲವು ಕಂಡು ಬರುತ್ತಿದೆ ಎಂದರು.
ಕಾಂಗ್ರೆಸ್ಗೆ ಟೋಪಿ ಹಾಕಿ ಹೋಗಿರುವ ವ್ಯಕ್ತಿಯಿಂದ ತಾವು ದಲಿತರ ಬಗ್ಗೆ ತಿಳಿಯಬೇಕಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು.
ಮತದಾರರು ಪ್ರಬುದ್ಧರಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ಯಾರನ್ನು ಮನೆಗೆ ಕಳುಹಿಸಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ದಲಿತ ಸಮಾವೇಶ:
ಹಾಸನದಲ್ಲಿ ನಾಳೆ ದಲಿತ ಸಮಾವೇಶ ನಡೆಸಲಾಗುವುದು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದಲಿತ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.