ಮಂಡ್ಯ: ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಟಾರ್ ನಟರು, ಪ್ರಮುಖ ರಾಜಕಾರಣಿಗಳು ಪ್ರಚಾರ ನಡೆಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನಿಖಿಲ್ ಗೆಲ್ಲಿಸಲು ಮೈತ್ರಿ ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಗುರು- ಶಿಷ್ಯರಾದ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಖಿಲ್ ಪರ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.
ಬೆಳಿಗ್ಗೆ ನಾಗಮಂಗಲದಲ್ಲಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಪ್ರಚಾರ ನಡೆಸಿದರು. ಮಧ್ಯಾಹ್ನ 2.30ಕ್ಕೆ ಮಳವಳ್ಳಿಯ ಸಾರ್ವಜನಿಕ ಸಭೆಯಲ್ಲಿ ಇವರು ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಹೊಳಲು ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಹಾಜರಿ ಹಾಕಲಿದ್ದಾರೆ. ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಹಾಗೂ ಮೈಸೂರು ಅಭ್ಯರ್ಥಿ ವಿಜಯ್ ಶಂಕರ್ ಪರ ದೋಸ್ತಿ ನಾಯಕರು ಮತಯಾಚನೆ ಮಾಡಲಿದ್ದಾರೆ.
ನಿನ್ನೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ಬಿಜೆಪಿ ಸೇರ್ಪಡೆಯಾಗಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಿಂತರೆ, ಬಿಜಪಿ ಅಭ್ಯರ್ಥಿಯಾಗಿ ಮಂಜು ಕಣದಲ್ಲಿದ್ದಾರೆ.