ನಮೋ ಟಿವಿಗೆ ಸಂಕಷ್ಟ; ರಾಜಕೀಯ ಅಂಶವಿರುವ ಕಾರ್ಯಕ್ರಮ ಪ್ರಸಾರಕ್ಕೆ ನಿರ್ಬಂಧ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಿದ್ಧಗೊಂಡಿದ್ದ ಬಯೋಪಿಕ್​ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡಿತ್ತು. ಈಗ ನಮೋ ಟಿವಿ ಮೇಲೆ ಕೆಲ ನಿರ್ಬಂಧಗಳನ್ನು ಆಯೋಗ ಹೇರಿದೆ. ಯಾವುದೇ ಕಾರ್ಯಕ್ರಮ ಪ್ರಸಾರವಾಗಬೇಕಾದರೂ ಚುನಾವಣಾ ಆಯೋಗದ ಮಾಧ್ಯಮ ಪ್ರಮಾಣ ಪತ್ರ ನೀಡುವ ಸಮಿತಿಯಿಂದ ಒಪ್ಪಿಗೆ ಪಡೆಯಲೇಬೇಕು ಎಂದು ಹೇಳಿದೆ.

ಡಿಟಿಎಚ್​ನಲ್ಲಿ 24 ಗಂಟೆ ಪ್ರಸಾರವಾಗುವ ಈ ವಾಹಿನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕುರಿತ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ಇದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ. ಈ ಕುರಿತಂತೆ ಚುನಾವಣಾ ಆಯೋಗ ಚುನಾವಣಾ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದೆ.

“ನಮೋ ವಾಹಿನಿಯಲ್ಲಿ ಬರುವ ಎಲ್ಲ ಕಾರ್ಯಕ್ರಮಗಳು ಪ್ರಮಾಣೀಕರಣಗೊಂಡೇ ಪ್ರಸಾರಗೊಳ್ಳಬೇಕು. ಒಂದೊಮ್ಮೆ, ಯಾವುದೇ ಅಂಶಗಳು ಪ್ರಮಾಣೀಕರಣಗೊಳ್ಳದೆ ಪ್ರಸಾರಗೊಂಡರೆ ಅಂಥ ಕಾರ್ಯಕ್ರಮಗಳನ್ನು ಕೂಡಲೇ ತೆಗೆದು ಹಾಕಬೇಕು,” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಮೋ ಟಿವಿ, ನಮೋ ಆ್ಯಪ್​ನ ಒಂದು ಭಾಗ. ಈ ವಾಹಿನಿ​ ನಡೆಸುವುದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಬಿಜೆಪಿ ಹೇಳಿಕೊಂಡಿತ್ತು.

ನಮೋ ಟಿವಿ ಹಾಗೂ ಅದರಲ್ಲಿ ಪ್ರಸಾರವಾಗುವ ಅಂಶಗಳ ಬಗ್ಗೆ ಈ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ನೇತೃತ್ವದ ಆಪ್​ ಪಕ್ಷ ಅಪಸ್ವರ ಎತ್ತಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.

ಏ.5ರಂದು ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ಬಿಡುಗಡೆಗೆ ಆಗಬೇಕಿತ್ತು. ಆದರೆ, ವಿಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ