ಬೀದರ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಬಿರಿಸಿನ ಪ್ರಚಾರ ನಡೆಸುತ್ತಿದ್ದಾರೆ.
ಅಂಗವೈಕಲ್ಯ ಹೊಂದಿರುವ ಮೌಲಪ್ಪ ಮಾಳಗೆ ತಮ್ಮ ಅಂಗವಿಕಲ ಸ್ನೇಹಿತರೊಂದಿಗೆ ಕ್ಷೇತ್ರದ ವಿವಿಧೆಡೆ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ.
ಶುಕ್ರವಾರ ಮರಖಲ ಗ್ರಾಮದಲ್ಲಿ ಪ್ರಚಾರ ನಡೆಸಿದ ಮಾಳಗೆ, ಅಂಗವಿಕಲನಾದ ನನಗೂ ಒಂದ ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.
ರಾಷ್ಟ್ರೀಯ ಪಕ್ಷಗಳು ಕ್ಷೇತ್ರವನ್ನು ಕಡೆಗಣಿಸಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣಕ್ಕೆ ಇಳಿದಿರುವೆ. ಟ್ರ್ಯಾಕ್ಟರ್ ಚಿಹ್ನೆ ಹೊಂದಿರುವ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಬೀದರ್ ಹಿಂದುಳಿದ ಕ್ಷೇತ್ರ. ನೀರಾವರಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನನಗೆ ಮತ ನೀಡುವ ಮೂಲಕ ಸಂಸತ್ ನಲ್ಲಿ ಬೀದರ್ ಧ್ವನಿ ಮೊಳಗಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.