ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಸಾಚಾತನ ಮತ್ತು ತಾಂತ್ರಿಕ ದೋಷದ ಕುರಿತ ರಾಜಕೀಯ ಚರ್ಚೆಗಳು ಮತ್ತೊಮ್ಮೆ ಗರಿಗೆದರಿವೆ.
ಮೊದಲ ಹಂತದ ಚುನಾವಣೆಯಲ್ಲಿ 16 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ದೇಶದ ಒಟ್ಟು 91 ಲೋಕಸಭಾ ಕ್ಷೇತ್ರ ಹಾಗೂ ಆಂಧ್ರಪ್ರದೇಶ, ಒಡಿಶಾ, ಅರುಣಾಚಲಪ್ರದೇಶ, ಸಿಕ್ಕಿಂ ರಾಜ್ಯಗಳ 296 ವಿಧಾನಸಭಾ ಕ್ಷೇತ್ರಗಳಿಗೆ ಏ.11 ರಂದು ಮತದಾನ ನಡೆದಿತ್ತು. ಈ ಪೈಕಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮ-ಕಾಶ್ಮೀರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿದೆ.
ಅಂಧ್ರಪ್ರದೇಶ ಒಂದರಲ್ಲೆ ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ 150 ಮತಗಟ್ಟೆಗಳಲ್ಲಿ ಮತದಾನ ಅರ್ಧಕ್ಕೆ ಸ್ತಬ್ಧವಾಗಿದೆ. ಪರಿಣಾಮ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವವನ್ನು ಆಗ್ರಹಿಸಿದ್ದಾರೆ.
ಆದರೆ, ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರಗಳು ಕೈಕೊಡುತ್ತಿರುವುದು ಇದೇ ಮೊದಲೇನಲ್ಲ. ಅಲ್ಲದೆ ಈ ಯಂತ್ರಗಳನ್ನು ತಿರುಚಬಹುದು (ಹ್ಯಾಕ್) ಎಂಬ ಗಂಭೀರ ಆರೋಪಗಳು ಆಗಿಂದಾಗ್ಗೆ ಕೇಳಿಬರುತ್ತಲೇ ಇದೆ. ಇದೇ ಕಾರಣಕ್ಕೆ ವಿಶ್ವದ ಸುಮಾರು 120 ರಾಷ್ಟ್ರಗಳು ಈ ಯಂತ್ರವನ್ನು ಬ್ಯಾನ್ ಮಾಡಿದೆ. ಆದರೂ, ಭಾರತದಲ್ಲಿ ಈ ಯಂತ್ರಗಳನ್ನು ಬಳಸುತ್ತಿರಲು ಕಾರಣವೇನು? ಇದರ ಇತಿಹಾಸವೇನು? ಈ ಯಂತ್ರವನ್ನು ಬ್ಯಾನ್ ಮಾಡಿದ ರಾಷ್ಟ್ರಗಳು ಯಾವುವು? ಇಲ್ಲಿದೆ ಡೀಟೆಲ್ಸ್.
ಭಾರತದಲ್ಲಿ ಇವಿಎಂ ಇತಿಹಾಸ: ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸುಮಾರು 80 ಕೋಟಿಗೂ ಅಧಿಕ ಮತದಾರರನ್ನು ಹೊಂದಿರುವ ಭಾರತದ ಚುನಾವಣೆ ಪ್ರಕ್ರಿಯೆಗಳಲ್ಲಿ ಇವಿಎಂ ಯಂತ್ರಗಳ ಬಳಕೆ ಆರಂಭವಾಗಿ ಕೇವಲ 15 ವರ್ಷಗಳಾಗಿವೆ ಅಷ್ಟೆ.
ಇಷ್ಟು ದೊಡ್ಡ ಪ್ರಮಾಣದ ಮತದಾರರಿರುವ ಭಾರತದಂತಹ ರಾಷ್ಟ್ರದಲ್ಲಿ ಮತ ಚಲಾಯಿಸಲು ಬ್ಯಾಲೆಟ್ ಪೇಪರ್ ಹೊಂದಿಸುವುದು ಹಾಗೂ ಅದರ ಎಣಿಕೆ ಎಂಬುದು ಸುಲಭದ ವಿಚಾರವಲ್ಲ. ಅಲ್ಲದೆ ಇದು ಅತ್ಯಂತ ದುಬಾರಿ ಪ್ರಕ್ರಿಯೆಯೂ ಹೌದು. ಇದೇ ಕಾರಣಕ್ಕೆ ಮೊಟ್ಟಮೊದಲ ಬಾರಿಗೆ ರಾಜಕೀಯ ವಲಯದಲ್ಲಿ ಇವಿಎಂ ಯಂತ್ರಗಳ ಕುರಿತ ಆಲೋಚನೆ ಕವಲೊಡೆದಿತ್ತು.
ಹಾಗೆ ನೋಡಿದರೆ ಭಾರತದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ ಯಂತ್ರ) ಮೊದಲ ಬಾರಿಗೆ ಚರ್ಚೆಯ ಕೇಂದ್ರಕ್ಕೆ ತಂದವರು ಎಂ.ಬಿ. ಹನೀಫ ಎಂಬವರು.
‘ಎಲೆಕ್ಟ್ರಾನಿಕಲಿ ಆಪರೇಟೆಡ್ ವೋಟ್ ಕೌಂಟಿಂಗ್ ಮಷೀನ್’ ಎಂದು ಕರೆಯಲಾದ ಈ ಉಪಕರಣವನ್ನು ಹನೀಫ 1980ರಲ್ಲಿ ಮೊದಲ ಬಾರಿಗೆ ಸರಕಾರಿ ಪ್ರದರ್ಶನವೊಂದರಲ್ಲಿ ಪ್ರದರ್ಶಿಸಿದ್ದರು. ಈ ಯಂತ್ರದ ಸುಲಭ ಹಾಗೂ ಸರಳ ತಂತ್ರಜ್ಞಾನ ಆ ಕಾಲದಲ್ಲಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿತ್ತು. ಪರಿಣಾಮ ಭಾರತೀಯ ಚುನಾವಣಾ ಆಯೋಗ 1982ರಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯ ‘ಪಾರೂರ್’ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕೆಲವೇ ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಈ ಯಂತ್ರವನ್ನು ಪರಿಚಯಿಸಿತ್ತು
ನಂತರ 1999ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲ ಕ್ಷೇತ್ರಗಳಲ್ಲಿ ಇವಿಎಂ ಯಂತ್ರಗಳನ್ನು ಬಳಸಲಾಗಿತ್ತು. ಆದರೆ, ವ್ಯಾಪಕವಾಗಿ ಭಾರತದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಇವಿಎಂ ಬಳಕೆಗೆ ಬಂದದ್ದು 2004ರ ಲೋಕಸಭಾ ಚುನಾವಣೆಯಲ್ಲಿ.
ಎವಿಎಂ ಯಂತ್ರಗಳ ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದ ಭಾರತೀಯ ಚುನಾವಣಾ ಆಯೋಗ ಇದಾದ 7 ವರ್ಷಗಳ ನಂತರ ‘ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ಸ್ ಆಫ್ ಇಂಡಿಯಾ. ಲಿ’ ನೇತೃತ್ವದಲ್ಲಿ ಇವಿಎಂಗಳ ತಯಾರಿಕೆ ಆರಂಭಿಸಿತ್ತು. ಐಐಟಿ ಬಾಂಬೆಯ ಕೆಲವು ಉಪನ್ಯಾಸಕರು ಈ ಯಂತ್ರದ ವಿನ್ಯಾಸವನ್ನು ಮರು ರೂಪಿಸಿದ್ದರು. ಈ ಉಪಕರಣದಲ್ಲಿ ಎರಡು ಪ್ರಮುಖ ಭಾಗಗಳಿದ್ದು, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಎಂದು ಅವುಗಳನ್ನು ವಿಭಾಗಿಸಲಾಗಿದೆ. ಒಂದು ಯಂತ್ರಕ್ಕೆ ಖರ್ಚಾಗುವ ಹಣ ಕೇವಲ 5 ಸಾವಿರ ರೂಪಾಯಿಗಳಷ್ಟೆ.
ಮತಗಟ್ಟೆಗಳಿಗೆ ಸಾಗಿಸಲು ಮತ್ತು ಮತಗಳ ಎಣಿಕೆಯ ಬ್ಯಾಲೆಟ್ ಪೇಪರ್ಗಳಿಗೆ ಹೋಲಿಸಿದರೆ ಇವಿಎಂಗಳು ಸರಳವಾಗಿತ್ತು. ಕಡಿಮೆ ವೆಚ್ಚದ್ದಾಗಿತ್ತು, ಕೆಲವೇ ಗಂಟೆಗಳ ಒಳಗೆ ನಿಖರ ಫಲಿತಾಂಶ ನೀಡುತ್ತಿತ್ತು. ಇದೇ ಕಾರಣಕ್ಕೆ ಈ ಯಂತ್ರಗಳು ಆರಂಭ ಕಾಲದಲ್ಲೇ ಹೆಚ್ಚು ಮನ್ನಣೆ ಗಳಿಸಿತ್ತು. ಆದರೆ, ಬರುಬರುತ್ತಾ ಸಹಜವಾಗಿಯೇ ಈ ತಂತ್ರಜ್ಞಾನದ ಮಿತಿಗಳ ಕುರಿತು ಆತಂಕಗಳು ವ್ಯಕ್ತವಾಗುತ್ತಿವೆ.
ಪ್ರಜಾಪ್ರಭುತ್ವಕ್ಕೆ ಆತಂಕವಾಗಿರುವ ಇವಿಎಂ: ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಬಹುದು ಎಂಬ ಅನುಮಾನವೇನು ಹೊಸದಲ್ಲ. 2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿತ್ತು. ಅಲ್ಲದೆ ಬಿಜೆಪಿಯ ‘ರೈಸಿಂಗ್ ಇಂಡಿಯಾ’ ಕ್ಯಾಂಪೇನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಬಿಜೆಪಿ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿ ಬಹುಮತದ ಸರಕಾರ ರಚಿಸಲಿದೆ ಎಂದೆ ಎಲ್ಲರೂ ಭಾವಿಸಿದ್ದರು. ಆದರೆ, 2004ರ ಲೋಕಸಭಾ ಚುನಾವಣೆ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಹುಸಿಗೊಳಿಸಿತ್ತು.
ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಇವಿಎಂ ಯಂತ್ರಗಳನ್ನು ವ್ಯಾಪಕವಾಗಿ ಬಳಸಲಾದ ಮೊದಲ ಚುನಾವಣೆಯಲ್ಲೇ ಈ ಯಂತ್ರದ ಕುರಿತ ಸಾಚಾತನದ ಪ್ರಶ್ನೆ ಎದ್ದಿತ್ತು. ಅಂದಿನಿಂದ ಪ್ರತಿಯೊಂದು ಚುನಾವಣೆಯಲ್ಲೂ ಇದರ ಸಾಚಾತನ ಮತ್ತೆ ಮತ್ತೆ ರಾಜಕೀಯ ಚರ್ಚಾ ವಿಷಯವಾಗಿ ಮುನ್ನಲೆಗೆ ಬರುತ್ತಲೇ ಇದೆ.
2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆಯಿಂದಲೇ ನರೇಂದ್ರ ಮೋದಿ ಗೆಲುವು ಸಾಧಿಸಿದರು ಎಂಬುದರಿಂದ ಹಿಡಿದು 2017ರಲ್ಲಿ ಉತ್ತರಪ್ರದೇಶ ಹಾಗೂ ಗುಜರಾತಿನ ವಿಧಾನಸಭೆಗೆ ನಡೆದ ಚುನಾವಣೆಯವರೆಗೆ ಎಲ್ಲಾ ಸಂದರ್ಭದಲ್ಲೂ ಇವಿಎಂ ಹ್ಯಾಕಿಂಗ್ ಸದ್ದು ಕೇಳಿಬರುತ್ತಲೇ ಇದೆ.
ಇತ್ತೀಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿದ್ದ ಮತಕ್ಕೂ ಹಾಕಿರುವ ಮತಕ್ಕೂ ತಾಳೆಯೇ ಆಗದೆ ಫಲಿತಾಂಶ ನೀಡಲು ತಡರಾತ್ರಿಯಾದದ್ದನ್ನು ಇಲ್ಲಿ ಸ್ಮರಿಸಬಹುದು.
ಈ ನಡುವೆ ಚುನಾವಣಾ ಸಂದರ್ಭದ ಮಧ್ಯದಲ್ಲೇ ಮತಯಂತ್ರಗಳು ಆಗಾಗ್ಗೆ ಕೈಕೊಡುತ್ತಿರುವುದು ಭಾರತೀಯ ಚುನಾವಣಾ ಆಯೋಗಕ್ಕೆ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ದೇಶದ ಪ್ರಮುಖ ನಾಯಕರಾದ ಮಾಯಾವತಿ, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್ ಹಾಗೂ ಬಿಜೆಪಿ ಪಕ್ಷದವರೇ ಆದ ಸುಬ್ರಮಣಿಯನ್ ಸ್ವಾಮಿ ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈ ಯಂತ್ರದ ತಂತ್ರಜ್ಞಾನ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಹ್ಯಾಕ್ ಮಾಡಬಹುದು ಎಂದು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.
ಇವಿಎಂ ಮೇಲೆ ಇಂತಹ ಆರೋಪಗಳು ಎದುರಾಗುತ್ತಿದ್ದಂತೆ 2010ರಲ್ಲಿ ಚುನಾವಣಾ ಆಯೋಗ ಹರಿಪ್ರಸಾದ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತ್ತು.
ವಿಸ್ಕೃತ ತನಿಖೆ ನಡೆಸಿದ ಸಮಿತಿ, “ಪಾರದರ್ಶಕ ಚುನಾವಣೆಗೆ ಇವಿಎಂ ಯಂತ್ರಗಳು ಸೂಕ್ತವಲ್ಲ. ಹೀಗಾಗಿ ಮತ್ತೆ ಬ್ಯಾಲೆಟ್ ಪೇಪರ್ಗಳನ್ನು ಜಾರಿಗೆ ತರಬೇಕು,” ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು. ಆದರೆ, ಈವರೆಗೆ ಹರಿಪ್ರಸಾದ್ ಆಯೋಗದ ಶಿಫಾರಸನ್ನು ಜಾರಿಗೆ ತರಲು ಚುನಾವಣಾ ಆಯೋಗ ಮನಸ್ಸು ಮಾಡದಿರುವುದು ದುರದೃಷ್ಟಕರ.
120 ದೇಶಗಳಲ್ಲಿ ಇವಿಎಂ ಬ್ಯಾನ್ : ಅಸಲಿಗೆ ಮತಚಲಾವಣೆ ಮೂಲಕ ತಮ್ಮ ಪ್ರಭುತ್ವವನ್ನು ಆಯ್ಕೆ ಮಾಡುವ 120 ರಾಷ್ಟ್ರಗಳಲ್ಲಿ ಇಂದು ಅಧೀಕೃತವಾಗಿ ಇವಿಎಂ ಯಂತ್ರವನ್ನು ಬ್ಯಾನ್ ಮಾಡಲಾಗಿದೆ.
ಪಾರದರ್ಶಕತೆ ಕೊರತೆ ಕಾರಣಕ್ಕೆ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಇವಿಎಂ ಯಂತ್ರವನ್ನು ಬ್ಯಾನ್ ಮಾಡಿದ ದೇಶ ನೆದರ್ಲ್ಯಾಂಡ್. ಈ ಯಂತ್ರಗಳನ್ನು ಬ್ಯಾನ್ ಮಾಡುವ ಮುಂಚೆ ಐರ್ಲ್ಯಾಂಡ್ ಸುಮಾರು 51 ಮಿಲಿಯನ್ ಪೌಂಡ್ ವೆಚ್ಚ ಮಾಡಿ ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯ ಆಧಾರದಲ್ಲಿ ಐರ್ಲ್ಯಾಂಡ್ ಸಹ ತನ್ನ ದೇಶದಲ್ಲಿ ಇವಿಎಂ ಯಂತ್ರವನ್ನು ಬ್ಯಾನ್ ಮಾಡಿದೆ.
ಈ ಯಂತ್ರಗಳು ಸಂವಿಧಾನಕ್ಕೆ ವಿರುದ್ಧವಾದದ್ದು ಎಂಬ ಕಾರಣಕ್ಕೆ ಜರ್ಮನಿ ದೇಶವೂ ಈ ಯಂತ್ರವನ್ನು ಕಸದಬುಟ್ಟಿಗೆ ಎಸೆದಿದೆ. ಇನ್ನೂ ಇಟಲಿ, ವೆನಿಜುವೆಲಾ, ಉಕ್ರೇನ್, ಇಂಗ್ಲೆಂಡ್, ಪ್ರಾನ್ಸ್ ಹಾಗೂ ಅಮೇರಿಕಾ ದಂತಹ ತಾಂತ್ರಿಕ ದಿಗ್ಗಜ ದೇಶಗಳು ಸೇರಿದಂತೆ ವಿಶ್ವದ ಒಟ್ಟು 120 ದೇಶಗಳು ಈ ಯಂತ್ರಗಳು ನಂಬಿಕಾರ್ಹವಲ್ಲ ಎಂಬ ಕಾರಣಕ್ಕೆ ಮತ್ತೆ ಬ್ಯಾಲೆಟ್ ಪೇಪರ್ ಚುನಾವಣೆಗೆ ಮೊರೆಹೋಗಿವೆ.
ಹೀಗಿರುವಾಗ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆಗೆ ಪಾತ್ರವಾಗಿರುವ ಭಾರತದಲ್ಲಿ ಸಹಜವಾಗಿಯೇ ಇವಿಎಂ ಯಂತ್ರಗಳ ಸಾಚಾತನದ ಕುರಿತ ಪ್ರಶ್ನೆಗಳು ಮೂಡುತ್ತಿವೆ. ಅಧಿಕಾರದ ಚುಕ್ಕಾಣಿ ಹಿಡಿದವರು ಈ ಯಂತ್ರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆರೋಪಗಳೂ ಆಗಿಂದಾಗ್ಗೆ ಕೇಳಿಬರುತ್ತಲೇ ಇವೆ. ಆದರೆ, ಇವೆಲ್ಲಾ ಆರೋಪಗಳನ್ನು ಬದಿಗೊತ್ತಿ ಚುನಾವಣೆಗಳಲ್ಲಿ ಮತ್ತೆ ಮತ್ತೆ ಪಾರದರ್ಶಕವಲ್ಲದ ಇವಿಎಂ ಯಂತ್ರಗಳನ್ನು ಬಳಸುತ್ತಿರುವುದು ಜನಾದೇಶದ ಅಪಚಾರವಲ್ಲದೆ ಮತ್ತೇನು? ಎಂಬುದು ಪ್ರಜ್ಞಾವಂತ ಜನಸಮುದಾಯದ ಪ್ರಶ್ನೆ.