ಲಂಡನ್: ವಿಕಿಲೀಕ್ಸ್ನ ಸಹಸಂಸ್ಥಾಪಕ ಜೂಲಿಯನ್ ಅಸಾಂಜೆಯನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಈಕ್ವೆಡಾರ್ ಸರ್ಕಾರ ಅಸಾಂಜೆಗೆ ನೀಡಿದ್ದ ಆಶ್ರಯವನ್ನು ಹಿಂಪಡೆದುಕೊಂಡಿದ್ದು, ಅಲ್ಲಿನ ದೂತಾವಾಸ ಅಧಿಕಾರಿಗಳು ಅಸಾಂಜೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧನದಿಂದ ಪಾರಾಗಲು ಅಸಾಂಜೆ 2012ರಿಂದಲೂ ಈಕ್ವೆಡಾರ್ ದೂತವಾಸದಲ್ಲಿ ಅಡಗಿಕೊಂಡಿದ್ದರು. ಪೊಲೀಸರನ್ನು ಗುರುವಾರ ಅಲ್ಲಿಗೆ ಕರೆಯಿಸಿಕೊಂಡ ದೂತವಾಸದ ಅಧಿಕಾರಿಗಳು ಅಸಾಂಜೆ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
ಬ್ರಿಟನ್ ಪೊಲೀಸರನ್ನು ದೂತವಾಸಕ್ಕೆ ಕರೆಯಿಸಿಕೊಂಡ ಬ್ರಿಟನ್ನಲ್ಲಿನ ಈಕ್ವೆಡಾರ್ ರಾಯಭಾರಿಗಳು ಅಸಾಂಜೆಯನ್ನು ತಮ್ಮ ವಶಕ್ಕೆ ಒಪ್ಪಿಸಿದ್ದಾಗಿ ಬ್ರಿಟನ್ ಪೊಲೀಸರು ತಿಳಿಸಿದ್ದಾರೆ. ಇದೀಗ ಅವರನ್ನು ಬಂಧಿಸಿರುವ ಬ್ರಿಟನ್ ಪೊಲೀಸರು ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋಟ್ನಲ್ಲಿ ಅವರನ್ನು ಹಾಜರುಪಡಿಸಿದ್ದಾರೆ.
ಜೂಲಿನ್ ಅಸಾಂಜೆ ವಿರುದ್ಧ 2012ರಲ್ಲಿ ಸ್ವೀಡನ್ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ಅವರನ್ನು ಸ್ವೀಡನ್ಗೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಮುಂದಾಗಿತ್ತು. ಕೊನೆಗೆ ಅವರ ವಿರುದ್ಧದ ಈ ಪ್ರಕರಣವನ್ನು ಕೈಬಿಡಲಾಗಿತ್ತು. ಆದರೂ, ವಿಕಿಲೀಕ್ಸ್ ಕುರಿತು ಅಮೆರಿಕದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಮ್ಮನ್ನು ಹಾಜರುಪಡಿಸಲು ಅಮೆರಿಕಕ್ಕೆ ಹಸ್ತಾಂತರಿಸಬಹುದು ಎಂಬ ಭೀತಿಯಲ್ಲಿ ಅಸಾಂಜೆ ಬ್ರಿಟನ್ನಲ್ಲಿನ ಈಕ್ವೆಡಾರ್ ದೂತವಾಸದಲ್ಲಿ ಆಶ್ರಯ ಪಡೆದುಕೊಂಡಿದ್ದರು.
ತನಗೆ ಆಶ್ರಯ ನೀಡಿದ್ದ ಈಕ್ವೆಡಾರ್ನ ಅಧ್ಯಕ್ಷ ಲೆನಿನ್ ಮಾರೆನೋಸ್ ಅವರ ವೈಯಕ್ತಿಕ ಜೀವನದ ಕೆಲವು ಗುಪ್ತ ಮಾಹಿತಿಗಳನ್ನು ವಿಕಿಲೀಕ್ಸ್ನಲ್ಲಿ ಸೋರಿಕೆ ಮಾಡಿದ್ದರಿಂದ ಆ ರಾಷ್ಟ್ರದೊಂದಿಗಿನ ಅಸಾಂಜೆ ಸಂಬಂಧ ಹಳಸಿತ್ತು. ಈ ವಿಷಯವಾಗಿ ಪ್ರತಿಕ್ರಿಯಿಸಿದ್ದ ಈಕ್ವೆಡಾರ್ ಅಧ್ಯಕ್ಷ ಮಾರೆನೋಸ್, ಅಸಾಂಜೆ ಅವರು ಆಶ್ರಯದ ಕೆಲವು ಒಪ್ಪಂದಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರು ವ್ಯಕ್ತಿಯೊಬ್ಬರಿಗೆ ರಾಜಕೀಯ ಆಶ್ರಯ ನೀಡುವ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಅಸಾಂಜೆಗೆ ನೀಡಲಾಗಿದ್ದ ರಾಜಕೀಯ ಆಶ್ರಯವನ್ನು ಹಿಂಪಡೆಯಲು ನಿರ್ಧರಿಸಿದರು ಎನ್ನಲಾಗಿದೆ.
Police arrest Julian Assange at Ecuadorian embassy in London