ಮತಗಟ್ಟೆ ಅಧಿಕಾರಿಗಳ ಮೇಲೆ ಆಕ್ರೋಶ; ಆಂಧ್ರದಲ್ಲಿ ಇವಿಎಂ ಯಂತ್ರವನ್ನು ನೆಲಕ್ಕೆಸೆದು ಪ್ರತಿಭಟಿಸಿದ ಜನಸೇನಾ ಅಭ್ಯರ್ಥಿ: ಪೊಲೀಸರ ವಶಕ್ಕೆ

ಅಮರಾವತಿ: ಮೊದಲ ಹಂತದ ಮತದಾನದ ದಿನವೇ ಆಂಧ್ರಪ್ರದೇಶದಲ್ಲಿ ಅಹಿತಕರ ಘಟನೆ ನಡೆದಿದ್ದು ಇವಿಎಂ ಯಂತ್ರವನ್ನು ನೆಲಕ್ಕೆಸೆದು ಹಾನಿಗೊಳಿಸಿದ ಪರಿಣಾಮ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಎಂಬುವವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಅನಂತಪುರ ಜಿಲ್ಲೆಯ ಗುಂಟ್ಕಲ್ ಕ್ಷೇತ್ರದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಇಂದು ಬೆಳಗ್ಗೆ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದಾರೆ. ಚುನಾವಣಾ ನಿಯಮಗಳ ಪ್ರಕಾರ ಇವಿಎಂ ಯಂತ್ರದ ಕ್ರಮ ಸಂಖ್ಯೆಗಳ ಸಾಲಿನಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಹೆಸರನ್ನು ಮೊದಲಿಗೆ ಮುದ್ರಿಸಬೇಕಿತ್ತು. ಆದರೆ, ಚುನಾವಣಾ ಅಧಿಕಾರಿಗಳು ವೈಎಸ್​ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೆಸರನ್ನು ಮೊದಲಿಗೆ ಮುದ್ರಿಸಿದ್ದು, ಮಧುಸೂದನ್ ಹೆಸರನ್ನು ಕೊನೆಯಲ್ಲಿ ಮುದ್ರಿಸಿದ್ದಾರೆ.

ಅಲ್ಲದೆ ವೈಎಸ್​ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೊರತಾಗಿ ಉಳಿದ ಅಭ್ಯರ್ಥಿಗಳ ಚಿಹ್ನೆಯನ್ನು ಸಹ ಅಸ್ಪಷ್ಟವಾಗಿ ಮುದ್ರಿಸಲಾಗಿದೆ. ಇದು ಸಾಮಾನ್ಯವಾಗಿ ಜನಸೇನಾ ಅಭ್ಯರ್ಥಿ ಮಧುಸೂದನ್ ಅವರನ್ನು ಕೆರಳಿಸಿದೆ. ಪರಿಣಾಮ ಮತ ಚಲಾಯಿಸಲು ತೆರಳಿದ್ದ ಅವರು ಮತಗಟ್ಟೆ ಅಧಿಕಾರಿಗಳ ಬಳಿ ಈ ಕುರಿತು ತಕರಾರು ತೆಗೆದಿದ್ದಾರೆ ಎಲ್ಲದೆ ಆಕ್ರೋಶದಲ್ಲಿ ಇವಿಎಂ ಮತಯಂತ್ರವನ್ನು ಎತ್ತಿ ನೆಲಕ್ಕೆ ಎಸೆದಿದ್ದಾರೆ. ಇದರಿಂದ ಇವಿಎಂ ಯಂತ್ರಕ್ಕೆ ಹಾನಿಯಾಗಿದ್ದು ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅನಂತಪುರ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜನಸೇನಾ ವಿರುದ್ಧ ಕುತಂತ್ರತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷಕ್ಕೆ ಅನಂತಪುರ ಜಿಲ್ಲೆಯಲ್ಲಿ ಉತ್ತಮ ಜನ ಬೆಂಬಲವಿದೆ.

ಹೀಗಾಗಿ ಗುಂಟ್ಕಲ್ ಕ್ಷೇತ್ರದಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ ಎಂದು ಚುನಾವಣಾ ಪೂರ್ವ  ಸಮೀಕ್ಷೆಗಳು ವರದಿ ಮಾಡಿದ್ದವು. ಇದೇ ಕಾರಣಕ್ಕೆ ತಮ್ಮ ಪಕ್ಷದ ಏಳಿಗೆ ಸಹಿಸದ ಆಡಳಿತರೂಢ ಪಕ್ಷ ಇಂತಹ ಕುಂತತ್ರಕ್ಕೆ ಮುಂದಾಗಿದೆ ಎಂದು ಜನಸೇನಾ ಆರೋಪಿಸಿದೆ.

ಆಂಧ್ರಪ್ರದೇಶದಲ್ಲಿ ಇಂದು 25 ಲೋಕಸಭಾ ಹಾಗೂ 175 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು. ಈಗಾಗಲೇ ಮತದಾರರು ಮತಗಟ್ಟೆಗಳತ್ತ ಅಧಿಕ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ