ಲೋಕಸಭಾ ಚುನಾವಣೆ:ಮೊದಲ ಹಂತದಲ್ಲಿ ತ್ರಿಪುರದಲ್ಲಿ ಅತಿ ಹೆಚ್ಚು ಮತದಾನ

ನವದೆಹಲಿ: ಲೋಕಸಭಾ ಚುನಾವಣೆ-2019ರ ಮೊದಲ ಹಂತದ ಮತದಾನ ಆಂಧ್ರ ಪ್ರದೇಶ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ತ್ರಿಪುರದಲ್ಲಿ ಅತಿ ಹೆಚ್ಚು ಶೇ.81ರಷ್ಟು ಮತದಾನವಾಗಿದೆ.

18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ನಕ್ಸಲರ ಭಯದಿಂದಾಗಿ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಮತದಾನವಾಗಿದೆ.

ಆಂಧ್ರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಮೂವರುರು ಬಲಿಯಾಗಿದ್ದು, ಕೆಲವು ಕಡೆ ಸಣ್ಣಪುಟ್ಟ ಘರ್ಷಣೆ, ಮತದಾನ ಯಂತ್ರದಲ್ಲಿನ ತಾಂತ್ರಿಕ ತೊಂದರೆ, ಬೂತ್ ವಶೀಕರಣ ವಿಫಲ ಯತ್ನದಂತಹ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸಂಜೆ 5 ಗಂಟೆಯವರೆಗೆ ಉತ್ತರ ಪ್ರದೇಶದಲ್ಲಿ ಶೇ.59, ಬಿಹಾರದಲ್ಲಿ ಶೇ.50, ಮೇಘಾಲಯದಲ್ಲಿ ಶೇ.62, ಅಂಡಾಮಾನ್ ಮತ್ತು ನಿಕೋಬಾರ್ ನಲ್ಲಿ ಶೇ.70, ಆಂಧ್ರ ಪ್ರದೇಶದಲ್ಲಿ ಶೇ.66, ಛತ್ತೀಸ್ ಗಢದಲ್ಲಿ ಶೇ.56, ತೆಲಂಗಾಣದಲ್ಲಿ ಶೇ.57, ಜಮ್ಮು ಮತ್ತು ಕಾಶ್ಮೀರದಲ್ಲಿ 54, ಮಿಜೋರಾಂನಲ್ಲಿ ಶೇ.60, ನಾಗಾಲ್ಯಾಂಡ್ ನಲ್ಲಿ ಶೇ.73, ಮಣಿಪುರದಲ್ಲಿ ಶೇ.78, ಸಿಕ್ಕಿಂನಲ್ಲಿ ಶೇ.75 ಅಸ್ಸಾಂನಲ್ಲಿ ಶೇ.67 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.58ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ