ಬೆಂಗಳೂರು, ಏ.11- ಅರವತ್ತೈದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಮನವಿ ಮಾಡಿದರು.
ನಗರದ ಬೊಮ್ಮನಹಳ್ಳಿ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿರುಸಿನ ಪ್ರಚಾರ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಈ ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂಬ ಸುಳ್ಳು ಮಾಹಿತಿ ನೀಡುವ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. 65 ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನೀಡಿದ ಕೊಡುಗೆಯ ಶೇ.10ರಷ್ಟನ್ನು ಮೋದಿ ಆಡಳಿತದಲ್ಲಿ ನೀಡಿಲ್ಲ.
ಕಾಂಗ್ರೆಸ್ ಪಕ್ಷ ದೇಶವನ್ನು ಸುಭದ್ರವಾಗಿ ಕಟ್ಟಿ ನೆಲೆ ನಿಲ್ಲಿಸಿದೆ. ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನೂ ನೀಡಿದೆ. ಬೆಂಗಳೂರು ಇಂದು ವಿಶ್ವದಲ್ಲೇ ತನ್ನದೇ ಆದ ವಿಶಿಷ್ಟ ಛಾಪು ಹೊಂದಲು ನಮ್ಮ ಪಕ್ಷ ಕಾರಣ. ನಿರುದ್ಯೋಗ ನಿವಾರಣೆ, ಬಡತನ ನಿವಾರಣೆ, ರೈತರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ತಂದಿದೆ. ಆದರೆ, ಯಾವುದೇ ಕೊಡುಗೆ ನೀಡದ ಮೋದಿ ಅವರು ಕೇವಲ ಧರ್ಮದ ಆಧಾರದ ಮೇಲೆ ಸೈನಿಕರನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಕುಲಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಾಕಷ್ಟು ಅನುಭವಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖರಾಗಿರುವ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಇವರು ಆಯ್ಕೆಯಾದಲ್ಲಿ ನಮ್ಮ-ನಿಮ್ಮೆಲ್ಲರ ದನಿಯಾಗಲಿದ್ದಾರೆ. ಸಮಸ್ಯೆಗಳ ನಿವಾರಣೆಗೆ ಸಹಕರಿಸಲಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮುತ್ಸದ್ಧಿ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿರುವುದರಿಂದ ನಾನು ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಪದ್ಮನಾಭನಗರ ಮುಂತಾದೆಡೆ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಥಳೀಯ ಕಾಂಗ್ರೆಸ್-ಜೆಡಿಎಸ್ ಮುಖಂಡರು ಸಾಥ್ ನೀಡಿದರು.