ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ; ಆಂಧ್ರದಲ್ಲಿ ಅಗ್ನಿಪರೀಕ್ಷೆಗೊಳಗಾಗಲಿರುವ ಚಂದ್ರಬಾಬು

ನವ ದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನಕ್ಕೆ ಗುರುವಾರ ಚಾಲನೆ ಸಿಗಲಿದ್ದು, 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.

ಭಾರತದಲ್ಲಿ ಈವರೆಗೆ ನಡೆದ ಲೋಕಸಭಾ ಚುನಾವಣೆಗಳಿಗಿಂತ  2019ರ ಲೋಕಸಭಾ ಚುನಾವಣೆ ಹೈವೋಲ್ಟೇಜ್ ಪಡೆದಿರುವುದು ಸುಳ್ಳಲ್ಲ. ಈ ಚುನಾವಣೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರ? ಅಥವಾ ಪರ್ಯಾಯ ಸರ್ಕಾರ ರಚನೆಯಾಗುತ್ತದೆಯೇ? ಎಂಬುದನ್ನು ನಿರ್ಧರಿಸಲಿದೆ. ಇದೇ ಕಾರಣಕ್ಕೆ ಇಡೀ ವಿಶ್ವವೇ ಈ ಚುನಾವಣೆಯ ಕುರಿತು ಕುತೂಹಲದಿಂದ ಎದುರು ನೋಡುತ್ತಿದೆ.

ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲಪ್ರದೇಶ, ಸಿಕ್ಕಿಂ ಹಾಗೂ ಒಡಿಶಾದ ನಾಲ್ಕು ಲೋಕಸಭಾ ವ್ಯಾಪ್ತಿಯಲ್ಲಿ ನಾಳೆ ಮೊದಲ ಹಂತದ ಮತದಾನ ಜರುಗಲಿದೆ. ಲೋಕಸಭೆಯ ಜೊತೆಗೆ ಆಂಧ್ರಪ್ರದೇಶ, ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆಗೂ ನಾಳೆಯೇ ಚುನಾವಣೆ ನಡೆಯಲಿರುವುದು ವಿಶೇಷ.

ಮೊದಲ ಹಂತದ ಮತದಾನ ಜರುಗುವ ಈ ಕ್ಷೇತ್ರಗಳಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಅಭ್ಯರ್ಥಿಗಳ ಪರವಾಗಿ ಈ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಈ ಇಬ್ಬರೂ ರಾಷ್ಟ್ರ ನಾಯಕರ ಸಾಮರ್ಥ್ಯ ಈ ಚುನಾವಣೆಯಲ್ಲಿ ಮತ್ತೊಮ್ಮೆ ಪರೀಕ್ಷೆಗೊಳಗಾಗಲಿದೆ.

ಆದರೆ, ಬಹುತೇಕ ರಾಷ್ಟ್ರ ಮಟ್ಟದ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಆಡಳಿತರೂಢ ಬಿಜೆಪಿ ಪಕ್ಷ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಲಿಗೆ ಈ ಚುನಾವಣೆಯ ಗೆಲುವು ಮತ್ತಷ್ಟು ಮಹತ್ವ ಪಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ