ಬೆಂಗಳೂರು,ಏ.10- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನಕ್ಕೆ ಇನ್ನು ಎಂಟು ದಿನ ಬಾಕಿ ಇರುವಾಗಲೇ ಪ್ರಮುಖ ಮೂರು ಪಕ್ಷಗಳಲ್ಲಿ ಉಂಟಾಗಿರುವ ಭಿನ್ನಮತ ಹಾಗೂ ವೈಮನಸ್ಸು ಸರಿಹೋಗುವ ಲಕ್ಷಣಗಳು ಕಾಣುತ್ತಿಲ್ಲ.
ಇದರ ಪರಿಣಾಮ ಅಭ್ಯರ್ಥಿಗಳಿಗೆ ಒಂದು ಕಡೆ ಆತಂಕ ಮತ್ತೊಂದು ಕಡೆ ಒಳಹೊಡೆತದ ಭೀತಿ ಕಾಡುತ್ತಿದ್ದು, ಫಲಿತಾಂಶ ಏನಾಗಲಿದೆಯೋ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಬಿಜೆಪಿಯನ್ನು ಸೋಲಿಸಬೇಕೆಂಬ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರೂ ಸ್ಥಳೀಯ ಮಟ್ಟದಲ್ಲಿ ಮಾತ್ರ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗುತ್ತಿಲ್ಲ.
ವಿಧಾನಸೌಧದಲ್ಲಿ ದೋಸ್ತಿ , ಹೊರಗಡೆ ಕುಸ್ತಿ ಎಂಬ ಮಾತನ್ನು ಅಕ್ಷರಶಃ ಎರಡೂ ಪಕ್ಷಗಳ ಕಾರ್ಯಕರ್ತರು ಸಾಬೀತು ಮಾಡುತ್ತಲೇ ಇದ್ದಾರೆ. ಇದು ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಸೀಮಿತವಾಗಿಲ್ಲ. ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಇದೆ.ಆದರೆ ಇದು ಬೂದಿ ಮುಚ್ಚಿ ಕೆಂಡಂತಿದ್ದು ಯಾವಾಗ ಜ್ವಾಲೆಯಾಗಿ ಸ್ಪೋಟಗೊಳ್ಳುತ್ತದೆ ಎಂಬುದು ಮಾತ್ರ ತಿಳಿಯುತ್ತಿಲ್ಲ.
ವಿಶೇಷವಾಗಿ ಮೈಸೂರು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಜೋಡಿಸಲು ಸಾಧ್ಯವೇ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮೊದಲ ಹಂತದಲ್ಲಿ ನಡೆಯಲಿರುವ ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷ ಎಷ್ಟೇ ಸರ್ಕಸ್ ನಡೆಸಿದರೂ ಹೊಂದಾಣಿಕೆ ಸಾಧ್ಯವಾಗದಿರುವುದು ಪಕ್ಷಗಳ ಮುಖಂಡರನ್ನು ನಿದ್ದೆಗೆಡುವಂತೆ ಮಾಡಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡುವ ಕುರಿತಂತೆ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಜಿಲ್ಲಾಧ್ಯಕ್ಷ ವಿಜಯಕುಮಾರ್ ನೇತೃತ್ವದಲ್ಲಿ ನಾಮಧಾರಿ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಜೆಡಿಎಸ್‍ಗೆ ಬೆಂಬಲ ನೀಡುವುದರ ಕುರಿತು ಕಾರ್ಯಕರ್ತರ ನಡುವೆ ಕಿತ್ತಾಟ ಆರಂಭವಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಕೆರಳಿ ಕೆಂಡವಾದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ. ಕಳೆದ 10 ತಿಂಗಳ ಅವಧಿಯಲ್ಲಿ ನಮಗೆ ಅವರು ನೀಡಿರುವ ಕಿರುಕುಳ ಅಷ್ಟಿಷ್ಟಲ್ಲ.
ಈಗ ಅವರ ಪರವಾಗಿ ನಾವು ಕ್ಷೇತ್ರದಲ್ಲಿ ಹೇಗೆ ಮತ ಯಾಚಿಸಬೇಕು?ನೀವು ಹೊಂದಾಣಿಕೆ ಮಾಡಿಕೊಂಡಿರಬಹುದು.ಇಲ್ಲಿ ಕಾಂಗ್ರೆಸ್-ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಹೊಂದಾಗಲು ಸಾಧ್ಯವೇ ಇಲ್ಲ. ನಾವು ಪಕ್ಷೇತರ ಅಭ್ಯರ್ಥಿ ಮತ ಹಾಕುತ್ತೇವೆ. ನಿಖಿಲ್‍ಕುಮಾರಸ್ವಾಮಿ ಅವರನ್ನುಬೆಂಬಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಒಂದು ಹಂತದಲ್ಲಿ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ಉಂಟಾಗಿ ಸಭೆ ಗೊಂದಲದ ಗೂಡಾಯಿತು.ಕಾರ್ಯಕರ್ತರನ್ನು ಸಮಾಧಾನಪಡಿಸಲು ನಾಯಕರು ಎಷ್ಟೇ ಹರಸಾಹಸಪಟ್ಟರೂ ಜೆಡಿಎಸ್ ಮಾತ್ರ ಬೆಂಬಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ಇತ್ತ ಮಂಡ್ಯದಲ್ಲಿ ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಕುರಿತು ಸಭೆ ನಡೆಸಲಾಯಿತು.ಆದರೆ ಇಲ್ಲಿಯೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರ ವಿರುದ್ಧ ತಿರುಗಿಬಿದ್ದರು.
ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಕಾರ್ಯಕರ್ತರಿಗೆ ಮುಖಂಡರು ಮನವಿ ಮಾಡಿದ್ದರು.ಆದರೆ ನಾವು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆಯೇ ಹೊರತು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಸಭೆಯಿಂದ ಹೊರ ನಡೆದಿದ್ದಾರೆ.
ಹಾಸನ, ತುಮಕೂರು ಮತ್ತು ಕೋಲಾರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.ಈಗಲೂ ಕೂಡ ಇಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಪ್ರತಿನಿತ್ಯ ಮಾರಾಮಾರಿ ನಡೆಯುತ್ತಲೇ ಇದೆ.
ತುಮಕೂರಿನ ಹಾಲಿ ಸಂಸದ ಮುದ್ದಹನುಮೇಗೌಡ ಈಗಲೂ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಜಿಲ್ಲೆಯಲ್ಲಿದ್ದರೂ ಜೆಡಿಎಸ್‍ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿಲ್ಲ. ಕೋಲಾರದಲ್ಲಿ ಸಂಸದ ಮುನಿಯಪ್ಪ ಪರ ಸ್ವಪಕ್ಷೀಯರೇ ತಿರುಗಿಬಿದಿದ್ದಾರೆ.
ಶಾಸಕರಾದ ವಿ.ಮುನಿಯಪ್ಪ , ನಾಗೇಶ್ ಸೇರಿದಂತೆ ಅನೇಕರು ಮುನಿಯಪ್ಪನವರ ಪ್ರಚಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ರಂಗಪ್ರವೇಶ ಮಾಡಿದ್ದು, ಅತೃಪ್ತರ ಮನವೊಲಿಸುವ ಕಸರತ್ತಿಗೆ ಕೈ ಹಾಕಿದ್ದಾರೆ.
ಬಿಜೆಪಿಯಲ್ಲೂ ಗೊಂದಲ:
ಇತ್ತ ಬಿಜೆಪಿಯಲ್ಲೂ ಈಗಲೂ ಗೊಂದಲ ಮುಂದುವರೆದಿದೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದಕ್ಕೆ ತೇಜಸ್ವಿನಿ ಅನಂತಕುಮಾರ್ ಈಗಲೂ ಕೂಡ ಪ್ರಚಾರಕ್ಕೆ ಧುಮುಕ್ಕಿಲ್ಲ. ಪಕ್ಷದ ನಾಯಕರು ಅವರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದರೂ ಸಂಧಾನ ಮಾತ್ರ ಫಲ ಕೊಟ್ಟಿಲ್ಲ.
ಹೀಗೆ ಮೂರು ಪಕ್ಷಗಳಲ್ಲಿ ಮತದಾನದ ದಿನಗಳು ಸಮೀಪಿಸುತ್ತಿದ್ದರೂ ಭಿನ್ನಮತ ಉಂಟಾಗಿರುವುದು ಅಭ್ಯರ್ಥಿಗಳಿಗೆ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ.