ಉಡುಪಿ,ಏ.10-ಸಮುದ್ರದಲ್ಲಿ ನಾಪತ್ತೆಯಾಗಿರುವ ಏಳು ಮೀನುಗಾರರ ಪತ್ತೆಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.ಈ ಬಗ್ಗೆ ಮನವಿ ಮಾಡಲು ಕೇಂದ್ರ ಗೃಹ ಸಚಿವರ ಭೇಟಿಗೆ ಸಮಯಾವಕಾಶ ಕೇಳಿದ್ದರೂ ಇದುವರೆಗೂ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ನಾಪತ್ತೆಯಾದ ಮೀನುಗಾರರ ಕುಟುಂಬದವರನ್ನು ಭೇಟಿ ಮಾಡಿ ಅವರ ನೋವನ್ನು ಆಲಿಸಿದ್ದು ತಾತ್ಕಾಲಿಕವಾಗಿ ಒಂದು ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ನಾಮಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೋ ಸಂಸ್ಥೆ ನೆರವನ್ನು ಕೋರಲಾಗಿದೆ. ಬೋಟ್ಗಳಿಗೆ ವೈಜ್ಞಾನಿಕ ರೀತಿಯಲ್ಲಿ ಸಲಕರಣೆ ಅಳವಡಿಸಲು ನಿರ್ಧರಿಸಲಾಗಿದ್ದು, ಬಜೆಟ್ನಲ್ಲಿ 3 ಕೋಟಿ ಅನುದಾನ ಒದಗಿಸಲಾಗಿದೆ. ಇನ್ನು ಮುಂದೆ ಯಾವುದೇ ಬೋಟ್ ಅಪಘಾತಕ್ಕೀಡಾದರೂ ನಿಖರ ಮಾಹಿತಿ ಬರಲಿದೆ ಎಂದರು.
ನಾಪತ್ತೆಯಾಗಿರುವ ಮೀನುಗಾರರ ಪತ್ತೆಹಚ್ಚಲು ನೌಕಾದಳವೂ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದ ಅವರು, ನಾಪತ್ತೆಯಾದ ಮೀನುಗಾರರ ಮನೆಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೋಗಿದ್ದರೇ? ಅವರಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸೂಕ್ಷ್ಮ ವಿಚಾರವನ್ನುಪ್ರಸ್ತಾಪಿಸಿ ಜನರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.
ಪ್ರಧಾನಿಯಾದವರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕೆ ಹೊರತು ಒಂದು ಸಮುದಾಯದವರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.