ಜಮ್ಮು: ಆರ್ಎಸ್ಎಸ್ ಮುಖಂಡ ಹಾಗೂ ಅವರ ಅಂಗರಕ್ಷಕನ ಮೇಲೆ ಆಸ್ಪತ್ರೆಯಲ್ಲೇ ಉಗ್ರನೋರ್ವ ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್’ವಾರ್ನಲ್ಲಿ ನಡೆದಿದೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಮಂಗಳವಾರ ಪ್ರತಿಭಟನೆ ಕೈಗೊಂಡರು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು-ಸುವ್ಯವಸ್ಥೆ ರಕ್ಷಣೆಗಾಗಿ ಕಿಶ್ತ್’ವಾರ್ ಮತ್ತು ಭದರ್ವಾಹ್ ಜಿಲ್ಲೆಗಳಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಅಲ್ಲದೆ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಹೆಚ್ಚಿನ ಭದ್ರತೆಗಾಗಿ ಸೇನೆ ಸಹ ಧಾವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಆರೆಸ್ಸೆಸ್ ನಾಯಕ ಚಂದರ್ಕಾಂತ್ ಶರ್ಮಾ ಅವರ ಮೇಲೆ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಉಗ್ರ, ಅವರ ಮೇಲೆ ದಾಳಿಗೆ ಯೋಜಿಸಿದ್ದ. ಈ ಪ್ರಕಾರ ಮಂಗಳವಾರ ಮಧ್ಯಾಹ್ನ 12.30ಕ್ಕೆ ಆಸ್ಪತ್ರೆಗೆ ದಾಂಗುಡಿ ಇಟ್ಟ ಉಗ್ರ, ಆರೆಸ್ಸೆಸ್ ನಾಯಕ ಚಂದ್ರಕಾಂತ್ ಶರ್ಮಾ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಶರ್ಮಾ ಅವರ ಅಂಗರಕ್ಷಕ ರಾಜೀಂದರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಅವರು ವಿಮಾನದ ಮೂಲಕ ಜಮ್ಮು ಆಸ್ಪತ್ರೆಗೆ ರವಾನಿಸಲಾಯಿತು. ಆದಾಗ್ಯೂ, ಶರ್ಮಾ ಅವರು ಸಾವನ್ನಪ್ಪಿದ್ದಾರೆ ಎಂದು ಕಿಶ್ತ್’ವಾರ್ ಹಿರಿಯ ಪೊಲೀಸ್ ಅಧಿಕಾರಿ ಶಕ್ತಿ ಪಾಠಕ್ ತಿಳಿಸಿದರು.