ನವದೆಹಲಿ, ಏ.10-ರಫೇಲ್ ಹಗರಣದಲ್ಲಿ ನ್ಯಾಯಾಲಯ ನೀಡಿದ್ದ ಕ್ಲೀನ್‍ಚಿಟ್ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಬಾರದು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಆಕ್ಷೇಪವನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯಲ್ಲಿ ರಫೇಲ್ ವ್ಯವಹಾರದಲ್ಲಿ ಸೋರಿಕೆಯಾದ ದಾಖಲಾತಿಗಳನ್ನು ಬಳಸಿಕೊಳ್ಳಬಹುದು ಎಂದು ಮಹತ್ವದ ತೀರ್ಪು ನೀಡಿದೆ.
ಲೋಕಸಭೆ ಮೊದಲ ಹಂತದ ಚುನಾವಣೆಗೆ ಕೆಲ ದಿನ ಬಾಕಿ ಇರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ.
2018ರ ಡಿಸೆಂಬರ್ 14ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ರಫೇಲ್ ಹಗರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಭಾರತ ಮತ್ತು ಫ್ರಾನ್ಸ್ ಸರ್ಕಾರದ ನಡುವೆ ನಡೆದಿರುವ ಒಪ್ಪಂದ ಕ್ರಮಬದ್ಧವಾಗಿದೆ ಎಂದು ಕ್ಲೀನ್‍ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ, ಯಶ್ವಂತ್ ಸಿನ್ಹಾ, ವಕೀಲರಾದ ಪ್ರಶಾಂತ್ ಭೂಷಣ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಜತೆಗೆ ಹಿಂದು ಪತ್ರಿಕೆ ಮತ್ತು ಕ್ಯಾರಮನ್ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡಿದ್ದ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಿಚಾರಣೆ ವೇಳೆ ಇವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಸೇನೆಯ ರಹಸ್ಯಗಳನ್ನು ಬಹಿರಂಗಪಡಿಸುವ ದಾಖಲಾತಿಗಳನ್ನು ಪ್ರತಿವಾದಿಗಳು ಸಲ್ಲಿಸಿದ್ದಾರೆ.ಇದನ್ನು ಪರಿಗಣಿಸಬಾರದು ಎಂದು ಮನವಿ ಮಾಡಿತ್ತು.ಆದರೆ, ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ಎಸ್.ಕೆ.ಕೌಲ್, ಕೆ.ಎನ್.ಜೋಸೆಫ್ ಅವರುಗಳನ್ನೊಳಗೊಂಡ ಸಂಯುಕ್ತ ಪೀಠ ಕೇಂದ್ರ ಸರ್ಕಾರದ ಆಕ್ಷೇಪವನ್ನು ತಳ್ಳಿಹಾಕಿದೆ. ಹಾಗೆಯೇ ಪ್ರತಿವಾದಿಗಳು ಸಲ್ಲಿಸಿರುವ ಹೊಸ ದಾಖಲಾತಿಗಳ ಆಧಾರದ ಮೇಲೆ ಮುಂದಿನ ವಿಚಾರಣೆಯನ್ನು ನಡೆಸಲು ಒಪ್ಪಿಗೆ ಸೂಚಿಸಿದೆ.
ಸಂಯುಕ್ತ ಪೀಠದ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಮತ್ತೊಂದು ಅಂಶ ಸೇರಿಸಿದ್ದು, ರಫೇಲ್ ಯುದ್ಧ ವಿಮಾನಗಳ ಬೆಲೆ ನಿಗದಿಯನ್ನಷ್ಟೇ ಅಲ್ಲ, ವಿಮಾನ ತಯಾರಿಕೆಯ ಒಪ್ಪಂದದಲ್ಲಿ ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಯ ಜತೆ ಅಪ್ಸೆಟ್ ಪಾಟ್ನರ್ ಆಗಿರುವ ಭಾರತೀಯ ಕಂಪೆನಿಯ ಕುರಿತು ವಿಚಾರಣೆ ನಡೆಸಲಾಗುವುದು ಎಂದು ತೀರ್ಪು ನೀಡಿದೆ. ಇದರಿಂದಾಗಿ ಅನಿಲ್ ಅಂಬಾನಿ ನೇತೃತ್ವದ ಕಂಪೆನಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಕಳೆದ ವರ್ಷದ ಡಿಸೆಂಬರ್ 14ರಂದು ರಫೇಲ್ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿ ರಫೇಲ್ ವ್ಯವಹಾರ ಜ್ಯೇಷ್ಠತೆಯ ಆಧಾರದ ಮೇಲೆ ನಡೆದಿದೆ ಎಂದು ಕ್ಲೀನ್‍ಚಿಟ್ ನೀಡಿತ್ತು.
ಈ ತೀರ್ಪನ್ನು ಮರು ಪರಿಶೀಲಿಸುವಂತೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.ಮಾ.14ರಂದು ಪ್ರಾಥಮಿಕ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.ಇಂದು ತೀರ್ಪು ಪ್ರಕಟಗೊಂಡಿದೆ.
ಅರ್ಜಿದಾರರಲ್ಲಿ ಒಬ್ಬರಾದ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಅವರು ತೀರ್ಪಿನ ನಂತರ ಪ್ರತಿಕ್ರಿಯೆ ನೀಡಿ, ಅವಿರೋಧವಾಗಿ ಸುಪ್ರೀಂಕೋರ್ಟ್ ನಮ್ಮ ವಾದವನ್ನು ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರದ ತಕರಾರನ್ನು ತಿರಸ್ಕರಿಸಿದೆ.ಈ ತೀರ್ಪು ನಮಗೆ ಸಂತಸತಂದಿದೆ ಎಂದಿದ್ದಾರೆ.
ರಫೇಲ್ ವ್ಯವಹಾರದಲ್ಲಿ ಮಾಧ್ಯಮಗಳು ಪ್ರಕಟಿಸಿರುವ ದಾಖಲಾತಿಗಳು ಆಕ್ಷೇಪಾರ್ಹ. ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ ಅಂತಹ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಾರದು.ಹಾಜರು ಪಡಿಸಿದರೂ ನ್ಯಾಯಾಲಯ ಅವನ್ನು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ 123 ಪ್ರಕಾರ ಅಂಗೀಕರಿಸಬಾರದು ಎಂದು ರಕ್ಷಣಾ ಇಲಾಖೆ ವಾದಿಸಿತ್ತು.
ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆ ದಾಖಲಾತಿಗಳನ್ನು ಸಲ್ಲಿಸುವುದು, ಅಫಿಸಿಯಲ್ ಸೀಕ್ರೆಟ್ ಆ್ಯಕ್ಟ್ ಮತ್ತು ಮಾಹಿತಿ ಹಕ್ಕು ಕಾಯ್ದೆ ಸಕ್ಷನ್ 8(1)(ಎ) ಉಲ್ಲಂಘನೆ ಎಂದು ವಾದಿಸಿತ್ತು.
ರಕ್ಷಣಾ ಇಲಾಖೆಯ ವಾದವನ್ನು ಸುಪ್ರೀಂಕೋರ್ಟ್ ಒಪ್ಪದೆ ಅರ್ಜಿದಾರರ ವಾದವನ್ನು ಪುರಸ್ಕರಿಸಿದೆ.